ಬೆಂಗಳೂರು: ಮಾಹಿತಿ ತಂತ್ರಜ್ಞಾನ ದಿಗ್ಗಜ ವಿಪ್ರೋ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಆರಂಭಿಸಿರುವ ಲಾಭರಹಿತ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಬ್ರೈನ್ ರಿಸರ್ಚ್ (ಸಿಬಿಆರ್) ಸಂಸ್ಥೆಗಳು ಸಂಶೋಧನಾ ಸಹಭಾಗಿತ್ವದ ಒಡಂಬಡಿಕೆ ಮಾಡಿಕೊಂಡಿವೆ. ವೈಯಕ್ತಿಕಗೊಳಿಸಿದ ಎಐ ಆಧಾರಿತ ಆರೋಗ್ಯ ಸಂಬಂಧಿತ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಸಹಭಾಗಿತ್ವವು ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ (ಎಂಎಲ್) ಮತ್ತು ಬಿಗ್ ಡೇಟಾ ವಿಶ್ಲೇಷಣೆಯ ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳಲಿದೆ ಮತ್ತು ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಅಗತ್ಯವಾದ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಿದೆ.
ವಿಪ್ರೋದ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ &ಡಿ) ತಂಡವು ಎಐ ಆಧರಿತ ವೈಯಕ್ತಿಕ ಆರೈಕೆ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಿದೆ. ಈ ವೈಯಕ್ತಿಕ ಆರೈಕೆ ವ್ಯವಸ್ಥೆಯು ವ್ಯಕ್ತಿಯ ಆರೋಗ್ಯ ಇತಿಹಾಸ, ಅಪೇಕ್ಷಿತ ಆರೋಗ್ಯ ಸ್ಥಿತಿ ಮತ್ತು ಇತರ ನಡವಳಿಕೆಯ ಪ್ರತಿಕ್ರಿಯೆಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ.
ಇದು ವೃದ್ಧಾಪ್ಯದಲ್ಲಿಯೂ ಆರೋಗ್ಯದಿಂದಿರಲು, ಸಕಾರಾತ್ಮಕ ರೀತಿಯಲ್ಲಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲು ಮತ್ತು ಮಾನಸಿಕ-ಸಾಮಾಜಿಕ ಯೋಗಕ್ಷೇಮಗಳ ಉತ್ತೇಜನಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಎಐ ತಂತ್ರಜ್ಞಾನದ ಮೂಲಕ ಹೃದಯರಕ್ತನಾಳದ ಕಾಯಿಲೆ ಮತ್ತು ಸಂಬಂಧಿತ ನ್ಯೂರೋಡಿಜೆನರೇಟಿವ್ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಪ್ರಯತ್ನಿಸುತ್ತದೆ.
ಐಐಎಸ್ಸಿಯಲ್ಲಿ ಸಿಬಿಆರ್ ಸಹಯೋಗದೊಂದಿಗೆ ಡಿಜಿಟಲ್ ಅಪ್ಲಿಕೇಶನ್ ಆಧಾರಿತ ಪ್ರಯೋಗದ ಮೂಲಕ ಈ ವ್ಯವಸ್ಥೆಯನ್ನು ಪರೀಕ್ಷಿಸಲಾಗುವುದು.
ಈ ಬಗ್ಗೆ ಮಾಹಿತಿ ನೀಡಿದ ವಿಪ್ರೋ ಲಿಮಿಟೆಡ್ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ಅಜಯ್ ಚಂದರ್, "ಈ ಸಹಯೋಗವು ದೀರ್ಘಕಾಲದ ಕೆಲ ಜಾಗತಿಕ ಆರೋಗ್ಯ ಸಮಸ್ಯೆಗಳಿಗೆ ವೈಯಕ್ತಿಕ ಆರೈಕೆಯ ಬೆಂಬಲ ನೀಡುತ್ತದೆ" ಎಂದರು.
ಆರೋಗ್ಯ ರಕ್ಷಣೆಯಲ್ಲಿ ಎಐ ತಂತ್ರಜ್ಞಾನದ ಬಳಕೆ ಬಹಳ ಪ್ರಾಮುಖ್ಯತೆ ಪಡೆಯುತ್ತಿದೆ. ಎಐ ಮೂಲಕ ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ಸ್ಮಾರ್ಟ್, ವೇಗ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸಬಹುದು. ಇದು ರೋಗಿಗಳಿಗೆ ಗುಣಮಟ್ಟದ ಆರೈಕೆಯನ್ನು ಒದಗಿಸುತ್ತದೆ ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ಎಐ ಅನ್ನು ಬಳಸಿಕೊಳ್ಳುವ ಮೂಲಕ ವೈದ್ಯಕೀಯ ವಲಯವು ರೋಗನಿರ್ಣಯ ಮತ್ತು ಚಿಕಿತ್ಸೆಯ ಯೋಜನೆಯಿಂದ ಹಿಡಿದು ಆಡಳಿತಾತ್ಮಕ ಕಾರ್ಯಗಳವರೆಗೆ ವಿವಿಧ ಕೆಲಸಗಳನ್ನು ಉತ್ತಮಗೊಳಿಸಬಹುದು ಮತ್ತು ವೇಗಗೊಳಿಸಬಹುದು. ಇದರ ಪರಿಣಾಮದಿಂದ ರೋಗಿಗೆ ಸಿಗುವ ಒಟ್ಟಾರೆ ಚಿಕಿತ್ಸಾ ಗುಣಮಟ್ಟದಲ್ಲಿ ಸುಧಾರಣೆಯಾಗುತ್ತದೆ.
ಇದನ್ನೂ ಓದಿ: ಒಂಟಿತನ ಕಾಡುತ್ತಿದೆಯಾ? ನಿಮಗೆ ಸಂಗಾತಿಯಾಗಬಲ್ಲದು ಎಐ; ಹೊಸ ಆವಿಷ್ಕಾರ - AI For Mental Health