ನವದೆಹಲಿ: ಹೊಸದಾಗಿ ಬಿಡುಗಡೆಯಾದ ಸ್ಯಾಮ್ಸಂಗ್ನ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ ಗ್ಯಾಲಕ್ಸಿ ಎಸ್ 24 ಸರಣಿ ಕೇವಲ ಮೂರು ದಿನಗಳಲ್ಲಿ ಭಾರತದಲ್ಲಿ ದಾಖಲೆಯ 2,50,000 ಪ್ರಿ - ಬುಕಿಂಗ್ ಪಡೆದುಕೊಂಡಿದೆ. ಇದು ಅತ್ಯಂತ ಯಶಸ್ವಿ ಗ್ಯಾಲಕ್ಸಿ ಎಸ್ ಸರಣಿಯಾಗಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ. ಕಳೆದ ವರ್ಷ ದೇಶದಲ್ಲಿ ಬಿಡುಗಡೆಯಾಗಿದ್ದ ಗ್ಯಾಲಕ್ಸಿ ಎಸ್ 23 ಸ್ಮಾರ್ಟ್ಫೋನ್ ಮೂರು ವಾರಗಳಲ್ಲಿ 2,50,000 ಪ್ರಿ ಬುಕಿಂಗ್ ಪಡೆದುಕೊಂಡಿತ್ತು.
ಸ್ಯಾಮ್ಸಂಗ್ ತನ್ನ ಹೊಸ ಗ್ಯಾಲಕ್ಸಿ ಎಸ್ 24 ಸರಣಿಯನ್ನು ಜನವರಿ 17 ರಂದು ಜಾಗತಿಕವಾಗಿ ಬಿಡುಗಡೆ ಮಾಡಿದೆ ಮತ್ತು ಜನವರಿ 18 ರಂದು ದೇಶದಲ್ಲಿ ಪ್ರಿ ಬುಕಿಂಗ್ ಆರಂಭಿಸಿದೆ. "ಗ್ಯಾಲಕ್ಸಿ ಎಐನಿಂದ ಚಾಲಿತವಾದ ಗ್ಯಾಲಕ್ಸಿ ಎಸ್ 24 ಸರಣಿಯು ಮೊಬೈಲ್ ಕ್ರಾಂತಿಯ ಹೊಸ ಯುಗ ಪ್ರಾರಂಭಿಸಲಿದೆ ಮತ್ತು ಗ್ರಾಹಕರ ಕೈಗೆ ಎಐನ ಶಕ್ತಿಯನ್ನು ತಲುಪಿಸಲಿದೆ" ಎಂದು ಸ್ಯಾಮ್ಸಂಗ್ ಇಂಡಿಯಾದ ಎಂಎಕ್ಸ್ ವ್ಯವಹಾರದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಹೇಳಿದರು.
ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಮತ್ತು ಗ್ಯಾಲಕ್ಸಿ ಎಸ್ 24+ ಅನ್ನು ಪ್ರಿ ಬುಕಿಂಗ್ ಮಾಡುವ ಗ್ರಾಹಕರಿಗೆ 22,000 ರೂ. ಮೌಲ್ಯದ ಪ್ರಯೋಜನಗಳು ದೊರೆಯಲಿವೆ. ಮತ್ತು ಗ್ಯಾಲಕ್ಸಿ ಎಸ್ 24 ಅನ್ನು ಪ್ರಿ ಬುಕಿಂಗ್ ಮಾಡುವವರು 15,000 ರೂ.ಗಳ ಪ್ರಯೋಜನ ಪಡೆಯಲಿದ್ದಾರೆ. ಗ್ಯಾಲಕ್ಸಿ ಎಸ್ 24 ಸಾಧನಗಳ ಮಾರಾಟ ಜನವರಿ 31 ರಿಂದ ಪ್ರಾರಂಭವಾಗಲಿದೆ.
ಕೌಂಟರ್ ಪಾಯಿಂಟ್ ಸಂಶೋಧನೆಯ ಉಪಾಧ್ಯಕ್ಷ ನೀಲ್ ಶಾ ಅವರ ಪ್ರಕಾರ, ಒಟ್ಟಾರೆ ಪ್ರೀಮಿಯಂ ಮಾರುಕಟ್ಟೆಯು ಒಟ್ಟಾರೆ ಮಾರುಕಟ್ಟೆಗಿಂತ ವೇಗವಾಗಿ ಬೆಳೆಯುತ್ತಿದೆ. "ಇದು ಎಸ್ ಸೀರಿಸ್ನ ವಾರ್ಷಿಕ ಬೆಳವಣಿಗೆಗೆ ಮತ್ತು 2023 ರಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಶೇಕಡಾ 26 ರಿಂದ 28 ಕ್ಕೆ ಹೆಚ್ಚಿಸಲು ಸ್ಯಾಮ್ಸಂಗ್ಗೆ ಅನುಕೂಲವಾಗಲಿದೆ" ಎಂದು ಶಾ ಐಎಎನ್ಎಸ್ಗೆ ತಿಳಿಸಿದರು.
'ಮೇಡ್ ಇನ್ ಇಂಡಿಯಾ' ಗ್ಯಾಲಕ್ಸಿ ಎಸ್ 24 ಅಲ್ಟ್ರಾ, ಗ್ಯಾಲಕ್ಸಿ ಎಸ್ 24 + ಮತ್ತು ಗ್ಯಾಲಕ್ಸಿ ಎಸ್ 24 ಸ್ಮಾರ್ಟ್ ಫೋನ್ಗಳು ಎಐ ವೈಶಿಷ್ಟ್ಯಗಳಾದ ಲೈವ್ ಟ್ರಾನ್ಸ್ಲೇಟ್, ಇಂಟರ್ ಪ್ರೆಟರ್, ಚಾಟ್ ಅಸಿಸ್ಟ್, ನೋಟ್ ಅಸಿಸ್ಟ್ ಮತ್ತು ಟ್ರಾನ್ಸ್ ಕ್ರಿಪ್ಟ್ ಅಸಿಸ್ಟ್ ವೈಶಿಷ್ಟ್ಯಗಳನ್ನು ಹೊಂದಿವೆ. ಸ್ಯಾಮ್ಸಂಗ್ ಕೀಬೋರ್ಡ್ನಲ್ಲಿ ಅಳವಡಿಸಲಾದ ಎಐ ತಂತ್ರಜ್ಞಾನವು ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ನೈಜ ಸಮಯದಲ್ಲಿ ಸಂದೇಶಗಳನ್ನು ಭಾಷಾಂತರಿಸಬಲ್ಲದು.
ಇದನ್ನೂ ಓದಿ : ಸ್ಯಾಮ್ ಸಂಗ್ ರಿಂಗ್ ಇದೇ ವರ್ಷ ಬಿಡುಗಡೆ ಸಾಧ್ಯತೆ