ಮಾಸ್ಕೋ : ಪಾಶ್ಚಿಮಾತ್ಯ ದೇಶಗಳ ಕ್ಷಿಪಣಿಗಳನ್ನು ಆಕಾಶದಲ್ಲಿಯೇ ಯಶಸ್ವಿಯಾಗಿ ಹೊಡೆದುರುಳಿಸಬಲ್ಲ ಎಸ್-350 ವಿಟ್ಯಾಜ್ (S 350 Vityaz) ವಾಯು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿರುವುದಾಗಿ ರಷ್ಯಾ ಹೇಳಿದೆ. ಪ್ರಸ್ತುತ ನಡೆಯುತ್ತಿರುವ ವಿಶೇಷ ಮಿಲಿಟರಿ ಕಾರ್ಯಾಚರಣೆಯಲ್ಲಿ ತಾನು ತಯಾರಿಸಿರುವ ಎಸ್ -350 ವಿಟ್ಯಾಜ್ ಭೂಮಿಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಯು ಪಾಶ್ಚಿಮಾತ್ಯ ರಾಷ್ಟ್ರಗಳ ಕ್ಷಿಪಣಿಗಳನ್ನು ಪರಿಣಾಮಕಾರಿಯಾಗಿ ತಡೆದಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಟಾಸ್ ಸುದ್ದಿ ಸಂಸ್ಥೆ ಗುರುವಾರ ತಿಳಿಸಿದೆ.
"ವಿಶೇಷ ಮಿಲಿಟರಿ ಕಾರ್ಯಾಚರಣೆ ವಲಯದಲ್ಲಿ, ಎಸ್ -350 ವಾಯು ರಕ್ಷಣಾ ವ್ಯವಸ್ಥೆಯ ಯುದ್ಧ ಸಿಬ್ಬಂದಿಯು ಶತ್ರುಗಳ ವೈಮಾನಿಕ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ" ಎಂದು ಸಚಿವಾಲಯ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ವ್ಯವಸ್ಥೆಯು ಪಾಶ್ಚಿಮಾತ್ಯ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳಾದ ಎಟಿಎಸಿಎಂಎಸ್ ಮತ್ತು ಸ್ಟಾರ್ಮ್ ಶಾಡೋ ಎರಡನ್ನೂ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಎಸ್ -350 ಶತ್ರು ವಿಮಾನಗಳು ಅಥವಾ ಹೆಲಿಕಾಪ್ಟರ್ಗಳ ಸಂಪೂರ್ಣ ಸ್ಕ್ವಾಡ್ರನ್ ಅನ್ನು ನಾಶಮಾಡಬಲ್ಲದು. ಒಂದೇ ದಾಳಿಯಲ್ಲಿ 16 ವಿಮಾನ ಅಥವಾ ಹೆಲಿಕಾಪ್ಟರ್ಗಳನ್ನು ಇದು ಹೊಡೆದುರುಳಿಸಬಲ್ಲದು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.
ಹಿಂದಿನ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಹೋಲಿಸಿದರೆ, ವಿಟ್ಯಾಜ್ ಹೆಚ್ಚಿನ ಕ್ಷಿಪಣಿ ಸಾಮರ್ಥ್ಯ ಹೊಂದಿದೆ. ಒಂದೇ ಒಂದು ಎಸ್ -350 ಲಾಂಚರ್ ಇಡೀ ಎಸ್-300 ಡಿವಿಜನ್ನಲ್ಲಿರುವಷ್ಟು ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತದೆ.
"ಒಂದು ರಾಡಾರ್ ಸ್ಟೇಷನ್ ಬಳಸಿಕೊಂಡು ಐದು ಲಾಂಚರ್ಗಳನ್ನು ಏಕಕಾಲದಲ್ಲಿ ನಿರ್ವಹಿಸಬಹುದು ಮತ್ತು ವ್ಯವಸ್ಥೆಯು ಏಕಕಾಲದಲ್ಲಿ ಮೂರು ಸ್ಟೇಷನ್ ಗಳ ಕಾರ್ಯಾಚರಣೆಯನ್ನು ಬೆಂಬಲಿಸುತ್ತದೆ. ಇದು ಯುದ್ಧಕ್ಕೆ ನಿಯೋಜಿಸಲಾಗಿರುವ ಕ್ಷಿಪಣಿಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಬೃಹತ್ ಪ್ರಮಾಣದ ಕ್ಷಿಪಣಿ ದಾಳಿಯನ್ನು ಎದುರಿಸಲು ಅನುವು ಮಾಡಿಕೊಡುತ್ತದೆ" ಎಂದು ಸಚಿವಾಲಯ ಮಾಹಿತಿ ನೀಡಿದೆ.
ಎಸ್ -350 ಮಧ್ಯಮ ಶ್ರೇಣಿಯ ಭೂಮಿಯಿಂದ ಆಕಾಶಕ್ಕೆ ಕ್ಷಿಪಣಿಯನ್ನು ಹಾರಿಸುವ ವ್ಯವಸ್ಥೆಯಾಗಿದ್ದು, ರಷ್ಯಾದ ರಕ್ಷಣಾ ಕಂಪನಿ ಜಿಎಸ್ಕೆಬಿ ಅಲ್ಮಾಜ್-ಆಂಟೆ ಇದನ್ನು ಅಭಿವೃದ್ಧಿಪಡಿಸಿದೆ.
ಇನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಬಳಿ ಇರುವ ಎಟಿಎಸಿಎಂಎಸ್ ಅಥವಾ ಆರ್ಮಿ ಟ್ಯಾಕ್ಟಿಕಲ್ ಮಿಸೈಲ್ ಸಿಸ್ಟಮ್ ಇದು ಯುಎಸ್ ರಕ್ಷಣಾ ಕಂಪನಿ ಲಾಕ್ ಹೀಡ್ ಮಾರ್ಟಿನ್ ತಯಾರಿಸಿದ ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಸ್ಟಾರ್ಮ್ ಶಾಡೋ ಕ್ರೂಸ್ ಕ್ಷಿಪಣಿ 250 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಈ ಎರಡೂ ಕ್ಷಿಪಣಿಗಳನ್ನು 2023 ರಲ್ಲಿ ಉಕ್ರೇನ್ಗೆ ಪೂರೈಸಲಾಗಿರುವುದು ಗಮನಾರ್ಹ.
ಇದನ್ನೂ ಓದಿ : ಐಒಎಸ್ 18 ಅಪ್ಡೇಟ್: ಐಫೋನ್ಗಳಲ್ಲಿ ಕನ್ನಡ ಸೇರಿ ಭಾರತೀಯ ಭಾಷೆ ಬಳಸುವ ವೈಶಿಷ್ಟ್ಯ ಪರಿಚಯಿಸಿದ ಆ್ಯಪಲ್ - Indian Languages in iPhone