ಹೈದರಾಬಾದ್: ಈ ವರ್ಷದ ಮೊದಲ ಚಂದ್ರಗ್ರಹಣವು ಹೋಳಿ ಹಬ್ಬದಂದು ಸಂಭವಿಸಲಿದೆ. ಮಾರ್ಚ್ 25 ರಂದು ಹುಣ್ಣಿಮೆ ದಿನ ಈ ಗ್ರಹಣ ಸಂಭವಿಸಲಿದೆ. ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಸಂಭವಿಸುವ ಈ ಖಗೋಳ ವಿದ್ಯಮಾನದ ಕುರಿತು ಅನೇಕರಲ್ಲಿ ಕುತೂಹಲ ಮನೆ ಮಾಡಿದೆ.
ಮಾರ್ಚ್ 25ರಂದು ಸಂಭವಿಸಲಿರುವ ಈ ಚಂದ್ರಗ್ರಹಣವೂ ಜಗತ್ತಿನ ಹಲವೆಡೆ ಕಾಣಸಿಗಲಿದೆ. ಯುರೋಪ್, ಉತ್ತರ - ಪೂರ್ವ ಏಷ್ಯಾಗಳಾದ ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೆರಿಕ ಸೇರಿದಂತೆ ಹಲವು ಕಡೆ ಕಾಣಲಿದೆ. ಆದರೆ, ಭಾರತದಲ್ಲಿ ಈ ಚಂದ್ರಗ್ರಣ ವೀಕ್ಷಣೆ ಸಾಧ್ಯವಿಲ್ಲ.
ಈ ಬಾರಿ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 25ರಂದು ಹೋಳಿ ಹಬ್ಬದಂದೇ ಬಂದಿದೆ. ಭಾರತದ ಕಾಲಮಾನದ ಅನುಸಾರ ಬೆಳಗ್ಗೆ 10.23ಕ್ಕೆ ಈ ಗ್ರಹಣ ಶುರುವಾಗಲಿದೆ. ಒಟ್ಟು ಗ್ರಹಣ ಕಾಲ 4 ಗಂಟೆ 36 ನಿಮಿಷ 56 ಸೆಕೆಂಡ್ ಇರಲಿದೆ. ಭಾರತದ ಯಾವುದೇ ಪ್ರದೇಶದಲ್ಲಿ ಈ ಚಂದ್ರಗ್ರಹಣ ನೋಡಲು ಸಾಧ್ಯವಿಲ್ಲ.
ಚಂದ್ರಗ್ರಹಣ ಕುರಿತು: ಸಂಪೂರ್ಣ ಚಂದ್ರಗ್ರಹಣದಲ್ಲಿ, ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬರುತ್ತದೆ. ಪರಿಣಾಮವಾಗಿ, ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಬೀಳುತ್ತದೆ. ಇದು ಚಂದ್ರನನ್ನು ತಾತ್ಕಾಲಿಕವಾಗಿ ಮಬ್ಬಾಗಿಸುತ್ತದೆ. ಈ ಘಟನೆ ಆಕಾಶದಲ್ಲಿ ಅದ್ಭುತ ಘಟನೆ ಸೃಷ್ಟಿಸುತ್ತದೆ. ಇನ್ನು ಚಂದ್ರಗ್ರಹಣದ ಸಂದರ್ಭದಲ್ಲಿ ಮೂಡುವ ಕೆಂಪು ಬಣ್ಣ ಎಲ್ಲರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ. ಚಂದ್ರ ಗ್ರಹಣದ ಮಧ್ಯ ಭಾಗದಲ್ಲಿ ಭೂಮಿ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸಿದಾಗ ಚಂದ್ರನ ಸುತ್ತ ಕೆಂಪು ಉಂಗುರ ಕಂಡು ಬರುತ್ತದೆ. ಇದನ್ನು ಸಾಮಾನ್ಯವಾಗಿ ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ.
ಈ ಬಾರಿ ಪೆನಂಬ್ರಾಲ್ ಚಂದ್ರ ಹಣ: ಪೆನಂಬ್ರಾಲ್ ಚಂದ್ರಗ್ರಹಣದಲ್ಲಿ ಚಂದ್ರ, ಸೂರ್ಯ ಮತ್ತು ಭೂಮಿ ಒಂದೇ ಸಾಲಿನಲ್ಲಿ ಕಂಡು ಬರುವುದಿಲ್ಲ. ಸೂರ್ಯ ಮತ್ತು ಚಂದ್ರನ ನಡುವೆ ಬರುವ ಭೂಮಿ ಸೂರ್ಯನ ಬೆಳಕನನ್ನು ಬೀಳದಂತೆ ತಡೆಯುತ್ತದೆ. ಚಂದ್ರನು ಭೂಮಿಯ ಮಸುಕಾದ ಹೊರಗಿನ ನೆರಳು, ಪೆನಂಬ್ರಾ ಮೂಲಕ ಸೂಕ್ಷ್ಮವಾಗಿ ಹಾದುಹೋಗುತ್ತಾನೆ.
ಪೆನಂಬ್ರಲ್ ಚಂದ್ರಗ್ರಹಣ ಮುಗಿದ ಬಳಿಕ ಮುಂದಿನ ತಿಂಗಳು ಸೂರ್ಯ ಗ್ರಹಣ ಸಂಭವಿಸಲಿದೆ. ಏಪ್ರಿಲ್ 8 ರಂದು ಈ ಖಗೋಳದ ಘಟನೆ ನಡೆಯಲಿದೆ.
ಇದನ್ನೂ ಓದಿ: 'ಹೋಳಿ' ಸಂಭ್ರಮಕ್ಕೆ ಸಿದ್ಧತೆ: ಮನೆಯಲ್ಲೇ 'ನೈಸರ್ಗಿಕ ಗುಲಾಲ್' ತಯಾರಿಸುವುದು ಹೇಗೆ? - HOLI FESTIVAL