ನವದೆಹಲಿ : ಮೆಟಾ ಕಂಪನಿಯ ಅಪ್ಲಿಕೇಶನ್ಗಳ ಸರಾಸರಿ ದೈನಂದಿನ ಸಕ್ರಿಯ ಬಳಕೆದಾರರ (daily active people -DAP) ಸಂಖ್ಯೆ 3.24 ಬಿಲಿಯನ್ಗೆ (ಸುಮಾರು 324 ಕೋಟಿ) ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಇದು ಶೇ 7ರಷ್ಟು ಹೆಚ್ಚಳವಾಗಿದೆ. ಹಾಗೆಯೇ ಇನ್ಸ್ಟಾಗ್ರಾಮ್ ಥ್ರೆಡ್ಸ್ ನ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ ಮಾರ್ಚ್ನಲ್ಲಿ 150 ಮಿಲಿಯನ್ಗೆ ತಲುಪಿದೆ. ಫೆಬ್ರವರಿಯಲ್ಲಿ ಈ ಸಂಖ್ಯೆ 130 ಮಿಲಿಯನ್ ಆಗಿತ್ತು.
ಕಂಪನಿಯ ಆದಾಯ ಗಳಿಕೆಯ ಬಗ್ಗೆ ವಿಶ್ಲೇಷಕರೊಂದಿಗೆ ಮಾಹಿತಿ ಹಂಚಿಕೊಂಡು ಮಾತನಾಡಿದ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್ಬರ್ಗ್, ಬಳಕೆದಾರರು ಇನ್ಸ್ಟಾಗ್ರಾಮ್ ರೀಲ್ಸ್ ಮತ್ತು ವಿಡಿಯೋಗಳನ್ನು ನೋಡುವುದರಲ್ಲಿ ಹೆಚ್ಚಿನ ಸಮಯ ವ್ಯಯಿಸುತ್ತಿದ್ದಾರೆ ಹಾಗೂ ಆ್ಯಪ್ ಒಳಗಡೆ ರೀಲ್ಸ್ ನೋಡುವುದರಲ್ಲಿ ಬಳಕೆದಾರರು ಶೇ 50ರಷ್ಟು ಸಮಯ ಕಳೆಯುತ್ತಿದ್ದಾರೆ ಎಂದು ಹೇಳಿದರು.
"ರೀಲ್ಸ್ ಸಹ ಚೆನ್ನಾಗಿ ಬೆಳೆಯುತ್ತಿದೆ. ರೀಲ್ಸ್ನಲ್ಲಿ ಈಗ 150 ಮಿಲಿಯನ್ಗೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರಾಗಿದ್ದಾರೆ ಹಾಗೂ ಈ ವಿಭಾಗವು ಇದೇ ರೀತಿಯಲ್ಲಿ ತನ್ನ ಬೆಳವಣಿಗೆ ಮುಂದುವರಿಯಲಿದೆ ಎಂಬುದು ನನ್ನ ಆಶಯ" ಎಂದು ಅವರು ವಿಶ್ಲೇಷಕರಿಗೆ ತಿಳಿಸಿದರು.
ಮೆಟಾದ ಮೊದಲ ತ್ರೈಮಾಸಿಕದ ಒಟ್ಟು ಆದಾಯ 36.5 ಬಿಲಿಯನ್ ಡಾಲರ್ ಆಗಿದ್ದು, ವರದಿಯಾದ ಮತ್ತು ಸ್ಥಿರ ಕರೆನ್ಸಿ ಆಧಾರದ ಮೇಲೆ ಶೇಕಡಾ 27 ರಷ್ಟು ಹೆಚ್ಚಾಗಿದೆ. ಮೊದಲ ತ್ರೈಮಾಸಿಕದಲ್ಲಿ ಒಟ್ಟು ವೆಚ್ಚಗಳು 22.6 ಬಿಲಿಯನ್ ಡಾಲರ್ ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 6 ರಷ್ಟು ಹೆಚ್ಚಾಗಿದೆ.
"ಈ ವರ್ಷವು ಉತ್ತಮವಾಗಿ ಆರಂಭವಾಗಿದೆ. ಲಾಮಾ 3 ನೊಂದಿಗೆ ಮೆಟಾ ಎಐನ ಹೊಸ ಆವೃತ್ತಿಯು ವಿಶ್ವದ ಪ್ರಮುಖ ಎಐ ನಿರ್ಮಿಸುವ ಮತ್ತೊಂದು ಹೆಜ್ಜೆಯಾಗಿದೆ. ನಾವು ನಮ್ಮ ಅಪ್ಲಿಕೇಶನ್ಗಳಾದ್ಯಂತ ಅತ್ಯಧಿಕ ಬೆಳವಣಿಗೆ ಕಾಣುತ್ತಿದ್ದೇವೆ ಮತ್ತು ಮೆಟಾವರ್ಸ್ ಅನ್ನು ನಿರ್ಮಿಸುವಲ್ಲಿ ನಾವು ಸ್ಥಿರವಾದ ಪ್ರಗತಿಯನ್ನು ಮುಂದುವರಿಸುತ್ತೇವೆ" ಎಂದು ಜುಕರ್ಬರ್ಗ್ ಹೇಳಿದರು.
ಮೆಟಾ ಈಗ 69,329 ಉದ್ಯೋಗಿಗಳನ್ನು ಹೊಂದಿದೆ (ಮಾರ್ಚ್ 31 ರ ಹೊತ್ತಿಗೆ). ವರ್ಷದಿಂದ ವರ್ಷಕ್ಕೆ ನೋಡಿದರೆ ಮೆಟಾ ಉದ್ಯೋಗಿಗಳ ಸಂಖ್ಯೆ ಶೇಕಡಾ 10 ರಷ್ಟು ಕಡಿಮೆಯಾಗಿದೆ. "3.2 ಬಿಲಿಯನ್ ಗಿಂತ ಹೆಚ್ಚು ಜನರು ಪ್ರತಿದಿನ ಕನಿಷ್ಠ ಒಂದು ಮೆಟಾ ಅಪ್ಲಿಕೇಶನ್ ಅನ್ನು ಬಳಸುತ್ತಾರೆ ಎಂದು ಅಂದಾಜಿಸಿದ್ದೇವೆ ಮತ್ತು ನಾವು ಅಮೆರಿಕದಲ್ಲಿ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿದ್ದೇವೆ" ಎಂದು ಕಂಪನಿಯ ಸಿಇಒ ಹೇಳಿದರು.
ಇದನ್ನೂ ಓದಿ : ಫಿ-3-ಮಿನಿ: ಅತ್ಯಂತ ಚಿಕ್ಕ ಗಾತ್ರದ ಎಐ ಮಾಡೆಲ್ ಹೊರತಂದ ಮೈಕ್ರೊಸಾಫ್ಟ್ - Phi 3 Mini