ನವದೆಹಲಿ: ಜಿಮೇಲ್ ಸೇವೆ ಮುಚ್ಚುವುದಿಲ್ಲ ಹಾಗೂ ಅದು ಎಂದಿನಂತೆ ಮುಂದುವರೆಯಲಿದೆ ಎಂದು ಗೂಗಲ್ ಸ್ಪಷ್ಟನೆ ನೀಡಿದೆ. ಗೂಗಲ್ ತನ್ನ ಜಿಮೇಲ್ ಅನ್ನು ಸ್ಥಗಿತಗೊಳಿಸಲಿದೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ದಟ್ಟವಾಗಿ ಹರಿದಾಡಿದ್ದರಿಂದ ಬಳಕೆದಾರರು ಆತಂಕಕ್ಕೀಡಾಗಿದ್ದರು. ಹೀಗಾಗಿ ಗೂಗಲ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ.
'Google is sunsetting Gmail' ಎಂದು ತೋರಿಸುವ ಸ್ಕ್ರೀನ್ ಶಾಟ್ ಒಂದು ಎಕ್ಸ್ನಲ್ಲಿ ಹರಿದಾಡಿತ್ತು. ಇದು ವೈರಲ್ ಆಗುತ್ತಿದ್ದಂತೆಯೇ ನೆಟಿಜೆನ್ಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆ ಆರಂಭವಾಗಿತ್ತು.
"ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕಿಸಿದ, ತಡೆರಹಿತ ಸಂಪರ್ಕಕ್ಕೆ ಅವಕಾಶ ನೀಡಿದ ಮತ್ತು ಅಸಂಖ್ಯಾತ ಸಂಪರ್ಕಗಳನ್ನು ಬೆಳೆಸಿದ ನಂತರ, ಜಿಮೇಲ್ನ ಯುಗ ಕೊನೆಗೊಳ್ಳುತ್ತಿದೆ. ಆಗಸ್ಟ್ 1, 2024 ರ ಹೊತ್ತಿಗೆ ಜಿಮೇಲ್ ಅಧಿಕೃತವಾಗಿ ಸ್ಥಗಿತವಾಗಲಿದೆ, ಇದು ಅದರ ಸೇವೆಯ ಅಂತ್ಯವನ್ನು ಸೂಚಿಸುತ್ತದೆ" ಎಂದು ಎಕ್ಸ್ನಲ್ಲಿ ಪೋಸ್ಟ್ ಆಗಿರುವ ಸಂದೇಶದಲ್ಲಿ ತಿಳಿಸಲಾಗಿದೆ.
ಇದರರ್ಥ ಈ ದಿನಾಂಕದ ನಂತರ ಜಿಮೇಲ್ ಮೂಲಕ ಇನ್ನು ಮುಂದೆ ಇಮೇಲ್ಗಳನ್ನು ಕಳುಹಿಸಲು, ಸ್ವೀಕರಿಸಲು ಅಥವಾ ಸಂಗ್ರಹಿಸಲು ಬಳಸಲು ಸಾಧ್ಯವಾಗುವುದಿಲ್ಲ. ವಿಕಸನಗೊಳ್ಳುತ್ತಿರುವ ಡಿಜಿಟಲ್ ಸ್ಥಳಾವಕಾಶ ಮತ್ತು ನಮ್ಮ ಬಳಕೆದಾರರ ಅಗತ್ಯಗಳನ್ನು ಪೂರೈಸುವ ಉತ್ತಮ ಗುಣಮಟ್ಟದ, ನವೀನ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಎಚ್ಚರಿಕೆಯಿಂದ ಪರಿಗಣಿಸಿ ಜಿಮೇಲ್ ಅನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಅದರಲ್ಲಿ ಹೇಳಲಾಗಿದೆ.
ಈ ಪೋಸ್ಟ್ ಜಿಮೇಲ್ ಬಳಕೆದಾರರಲ್ಲಿ ವಿಪರೀತ ಗೊಂದಲ ಸೃಷ್ಟಿಸಿತ್ತು. ವಿವಾದಿತ ಸ್ಕ್ರೀನ್ಶಾಟ್ ಅನ್ನು 4 ದಶಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು ಗಮನಾರ್ಹ. ಆದರೆ ಇದೊಂದು ನಕಲಿ ದಾಖಲೆ ಎಂದು ಆರಂಭದಿಂದಲೇ ಕೆಲವರು ಹೇಳಿದ್ದರು. ಆದರೆ ಈ ವದಂತಿಗೆ ಫುಲ್ ಸ್ಟಾಪ್ ಹಾಕಿರುವ ಗೂಗಲ್, ಜಿಮೇಲ್ ಎಂದಿನಂತೆ ಕೆಲಸ ಮಾಡಲಿದೆ ಎಂದು ಹೇಳಿದೆ.
ಜಿಮೇಲ್ ಉಚಿತ ವೆಬ್ ಆಧಾರಿತ ಇಮೇಲ್ ಸೇವೆಯಾಗಿದ್ದು, ಇದು ಬಳಕೆದಾರರಿಗೆ 15 ಜಿಬಿಯಷ್ಟು ಇಮೇಲ್ ಸಂಗ್ರಹಣೆ ಮತ್ತು ನಿರ್ದಿಷ್ಟ ಮೇಲ್ಗಳನ್ನು ಹುಡುಕುವ ಅವಕಾಶ ನೀಡುತ್ತದೆ. ಜಿಮೇಲ್ ಪ್ರೋಗ್ರಾಂ ಸ್ವಯಂಚಾಲಿತವಾಗಿ ಸಂಬಂಧಿತ ಸಂದೇಶಗಳನ್ನು ಸಂಭಾಷಣೆಯ ಥ್ರೆಡ್ ಆಗಿ ಆಯೋಜಿಸುತ್ತದೆ. ಗೂಗಲ್ ಮೇಲ್ ಎಂದೂ ಕರೆಯಲ್ಪಡುವ ಜಿಮೇಲ್ ಅನ್ನು ವೈಯಕ್ತಿಕ ಕಂಪ್ಯೂಟರ್, ಟ್ಯಾಬ್ಲೆಟ್ ಅಥವಾ ಯಾವುದೇ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನಗಳಲ್ಲಿ ಬಳಸಬಹುದು.
ಇದನ್ನೂ ಓದಿ : ಡ್ಯೂಯೆಲ್ ಚಿಪ್, 50 ಎಂಪಿ ಕ್ಯಾಮೆರಾದ ಹೊಸ iQOO ಸ್ಮಾರ್ಟ್ಫೋನ್ ಬಿಡುಗಡೆ