Brooks Said Goodbye to OpenAI: ChatGPTಯ ಮೂಲ ಕಂಪನಿ OpenAIನಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿರುವ ಉದ್ಯೋಗಿಗಳು ಒಬ್ಬರ ಹಿಂದೊಬ್ಬರು ರಾಜೀನಾಮೆ ನೀಡುತ್ತಿದ್ದಾರೆ. ಇತ್ತೀಚಿನವರೆಗೂ ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೀರಾ ಮುರತಿ ರಾಜೀನಾಮೆ ನೀಡಿದರೆ, ಈಗ ಎಕ್ಸಿಕ್ಯೂಟಿವ್ ಆಗಿದ್ದ ಟಿಮ್ ಬ್ರೂಕ್ಸ್ ತಮ್ಮ ಸ್ಥಾನಕ್ಕೆ ಗುಡ್ಬೈ ಹೇಳಿದ್ದಾರೆ. OpenAI ತೊರೆದು Google DeepMindಗೆ ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಟಿಮ್ ಬ್ರೂಕ್ಸ್ ಅವರು ಓಪನ್ ಎಐನಿಂದ ಹಿಂದೆ ಸರಿಯುತ್ತಿರುವುದನ್ನು 'X' ಪೋಸ್ಟ್ನಲ್ಲಿ ಬಹಿರಂಗಪಡಿಸಿದ್ದಾರೆ. ವಿಡಿಯೋ ಪ್ರೊಡಕ್ಷನ್ಗೆ ಸಂಬಂಧಿಸಿದ ವಿಭಾಗಗಳಲ್ಲಿ ಕೆಲಸ ಮಾಡಲು ಗೂಗಲ್ ಡೀಪ್‌ಮೈಂಡ್‌ಗೆ ಸೇರುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗೂಗಲ್ನಲ್ಲಿ ಕೆಲಸ ಮಾಡಲು ತುಂಬಾ ಆಸಕ್ತಿ ಇದೆ ಎಂದಿದ್ದಾರೆ. "ನಾನು ಸೋರಾವನ್ನು ತರಲು ಎರಡು ವರ್ಷಗಳ ಕಾಲ OpenAIನಲ್ಲಿ ಕೆಲಸ ಮಾಡಿದ್ದೇನೆ. ಅದೊಂದು ಅದ್ಭುತ ಅನುಭವ. ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳು" ಎಂದು ಟಿಮ್ ಹೇಳಿದ್ದಾರೆ. ಡೀಪ್‌ಮೈಂಡ್‌ನ ಸಿಇಒ ಡೆಮಿಸ್ ಹಸ್ಸಾಬಿಸ್ ಅವರು ಟಿಮ್ ಅವರನ್ನು ಸಂಸ್ಥೆಗೆ ಸ್ವಾಗತಿಸಿದ್ದಾರೆ.
I will be joining @GoogleDeepMind to work on video generation and world simulators! Can't wait to collaborate with such a talented team.
— Tim Brooks (@_tim_brooks) October 3, 2024
I had an amazing two years at OpenAI making Sora. Thank you to all the passionate and kind people I worked with. Excited for the next chapter!
ಕೃತಕ ಬುದ್ಧಿಮತ್ತೆ (AI) ಆಧಾರಿತ ಟೆಕ್ಸ್ಟ್-ಟು-ವಿಡಿಯೋ ಜನರೇಟರ್ ಸೋರಾ ಮಾದರಿಯನ್ನು ತರುವಲ್ಲಿ ಟಿಮ್ ಬ್ರೂಕ್ಸ್ ಪ್ರಮುಖ ಪಾತ್ರ ವಹಿಸಿದ್ದರು. ವಿಡಿಯೋ ಮಾದರಿಗಳನ್ನು ತಂದ ತಂಡದ ಮುಖ್ಯಸ್ಥರಾಗಿದ್ದರು. ಸೋರಾ ಫೆಬ್ರವರಿ 2023ರಲ್ಲಿಯೇ ಜನತೆಗೆ ಲಭ್ಯವಾಗಿತ್ತು. ಬಳಕೆದಾರರು ನೀಡಿದ ಪ್ರಾಂಪ್ಟ್‌ನ ಆಧಾರದ ಮೇಲೆ ಹೆಚ್ಚಿನ ವಿವರಗಳೊಂದಿಗೆ 60 ಸೆಕೆಂಡ್ಗಳ ವಿಡಿಯೋವನ್ನು ಸೋರಾ ರಚಿಸಬಹುದು. ಆದರೆ, ಇದರ ಬಳಕೆಯಲ್ಲಿ ಹಲವು ತಾಂತ್ರಿಕ ಸಮಸ್ಯೆಗಳಿವೆ. ಒಂದು ನಿಮಿಷದ ವಿಡಿಯೋ ಮಾಡಲು 10 ನಿಮಿಷಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಕಂಪನಿಯು ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತಿರುವ ಹೊತ್ತಲ್ಲೇ ಟಿಮ್ ಬ್ರೂಕ್ಸ್ ತೊರೆದಿದ್ದಾರೆ.
ಇತ್ತೀಚೆಗೆ ಓಪನ್ AI ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಮುಖ್ಯ ತಾಂತ್ರಿಕ ಅಧಿಕಾರಿ ಮೀರಾ ಮುರತಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ದೊಡ್ಡ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸುವಲ್ಲಿ ಪ್ರಸಿದ್ಧಿ ಪಡೆದಿದ್ದ ಇವರು ಸುಮಾರು ಆರೂವರೆ ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದ್ದರು. ತನಗಾಗಿ ಹೆಚ್ಚಿನ ಸಮಯ ಮೀಸಲಿಡಲು ಮತ್ತು ಇನ್ನಷ್ಟು ಕಲಿಕೆಯ ಉದ್ದೇಶಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದರು.
ಓದಿ: OpenAI ಸಿಟಿಒ ಮೀರಾ ಮುರತಿ ರಾಜೀನಾಮೆ - OpenAI CTO Mira Murati Resigns