ನವದೆಹಲಿ: ಭಾರತದ ಸಾಂಪ್ರದಾಯಿಕ ಪಿಸಿ ಮಾರುಕಟ್ಟೆಯಲ್ಲಿ (ಡೆಸ್ಕ್ಟಾಪ್, ನೋಟ್ಬುಕ್ ಮತ್ತು ವರ್ಕ್ಸ್ಟೇಷನ್ಗಳನ್ನು ಒಳಗೊಂಡಂತೆ) 2023 ರಲ್ಲಿ 13.9 ಮಿಲಿಯನ್ ಪಿಸಿಗಳು (1 ಕೋಟಿ 39 ಲಕ್ಷ) ಮಾರಾಟವಾಗಿವೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 6.6 ರಷ್ಟು ಕಡಿಮೆಯಾಗಿದೆ ಎಂದು ಹೊಸ ವರದಿ ಮಂಗಳವಾರ ತೋರಿಸಿದೆ. ಇಂಟರ್ ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ಪ್ರಕಾರ, ಡೆಸ್ಕ್ಟಾಪ್ ಮಾರಾಟ ವರ್ಷದಿಂದ ವರ್ಷಕ್ಕೆ ಶೇಕಡಾ 6.7, ನೋಟ್ಬುಕ್ ಮತ್ತು ವರ್ಕ್ಸ್ಟೇಷನ್ ಮಾರಾಟ ಕ್ರಮವಾಗಿ ಶೇಕಡಾ 11.1 ರಷ್ಟು (ವರ್ಷದಿಂದ ವರ್ಷಕ್ಕೆ) ಮತ್ತು ಶೇಕಡಾ 14 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿದಿವೆ.
"ಕೊರೊನಾ ಸಾಂಕ್ರಾಮಿಕ ಅಲೆಯ ನಂತರ ಮಾರುಕಟ್ಟೆಯಲ್ಲಿನ ನಿಧಾನಗತಿಯಿಂದ ಪಿಸಿಗಳ ಬೇಡಿಕೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ 2022 ರ ದ್ವಿತೀಯಾರ್ಧ ಮತ್ತು 2023 ರ ಮೊದಲಾರ್ಧದಲ್ಲಿ ಮಾರಾಟ ಕಡಿಮೆಯಾಗಿದೆ" ಎಂದು ಐಡಿಸಿ ಇಂಡಿಯಾದ ಹಿರಿಯ ಸಂಶೋಧನಾ ವಿಶ್ಲೇಷಕ ಭರತ್ ಶೆಣೈ ಹೇಳಿದ್ದಾರೆ.
ನಿಧಾನಗತಿಯ ಮೊದಲಾರ್ಧದ ನಂತರ ಒಟ್ಟಾರೆ ಮಾರುಕಟ್ಟೆ 2023 ರ ದ್ವಿತೀಯಾರ್ಧದಲ್ಲಿ ಶೇಕಡಾ 12.9 ರಷ್ಟು (ವರ್ಷದಿಂದ ವರ್ಷಕ್ಕೆ) ಬೆಳವಣಿಗೆಯೊಂದಿಗೆ ಪುನರುಜ್ಜೀವನಗೊಂಡಿತು. 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಡೆಸ್ಕ್ಟಾಪ್ಗಳು ಮತ್ತು ನೋಟ್ಬುಕ್ಗಳ ಮಾರಾಟ ಕ್ರಮವಾಗಿ ಶೇಕಡಾ 16.8 (ವರ್ಷದಿಂದ ವರ್ಷಕ್ಕೆ) ಮತ್ತು ಶೇಕಡಾ 9.9 ರಷ್ಟು (ವರ್ಷದಿಂದ ವರ್ಷಕ್ಕೆ) ಏರಿಕೆಯಾಗಿವೆ.
ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಎಚ್ಪಿ ಕಳೆದ ವರ್ಷ ಶೇಕಡಾ 31.5 ರಷ್ಟು ಪಾಲನ್ನು ಹೊಂದಿದ್ದು, ವಾಣಿಜ್ಯ ಮತ್ತು ಗ್ರಾಹಕ ವಿಭಾಗಗಳಲ್ಲಿ ಅನುಕ್ರಮವಾಗಿ ಶೇಕಡಾ 33.6 ಮತ್ತು ಶೇಕಡಾ 29.4 ರಷ್ಟು ಪಾಲಿನೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ವರದಿ ಹೇಳಿದೆ. ಲೆನೊವೊ ಶೇಕಡಾ 16.7 ರಷ್ಟು ಪಾಲಿನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಡೆಲ್ ಟೆಕ್ನಾಲಜೀಸ್ ಶೇಕಡಾ 15.5 ರಷ್ಟು ಪಾಲಿನೊಂದಿಗೆ ಮೂರನೇ ಸ್ಥಾನದಲ್ಲಿದ್ದು 2023 ರಲ್ಲಿ ಶೇಕಡಾ 24.5 ರಷ್ಟು (ವರ್ಷದಿಂದ ವರ್ಷಕ್ಕೆ) ತೀವ್ರ ಕುಸಿತ ಕಂಡಿದೆ.
ಏಸರ್ ಗ್ರೂಪ್ 2023 ರಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 16.1 ರಷ್ಟು ಬೆಳವಣಿಗೆಯಾಗಿ ಶೇಕಡಾ 12.3ರಷ್ಟು ಪಾಲಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆಸೂಸ್ ವರ್ಷದಿಂದ ವರ್ಷಕ್ಕೆ ಶೇಕಡಾ 8.6ರಷ್ಟು ಬೆಳವಣಿಗೆಯಾಗಿ ಶೇಕಡಾ 7.9ರಷ್ಟು ಪಾಲಿನೊಂದಿಗೆ ಐದನೇ ಸ್ಥಾನದಲ್ಲಿದೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ : 10 ವರ್ಷಗಳಲ್ಲಿ ಐಪೋನ್ ಮಾರಾಟದಿಂದ $1.65 ಟ್ರಿಲಿಯನ್ ಆದಾಯ ಗಳಿಸಿದ ಆ್ಯಪಲ್