ಬೆಂಗಳೂರು: ಸ್ನೇಹಿತನೊಂದಿಗೆ ಖಾಸಗಿ ವಿಡಿಯೋ ಇರುವುದಾಗಿ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿ ಆಕೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪಿಯು ಜಯನಗರ ಪೊಲೀಸರ ಕೈಸೆರೆಯಾಗಿದ್ದಾನೆ.
ಯುವತಿ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿ ಆರ್.ಟಿ.ನಗರದ ಹರ್ಫಾತ್ ಎಂಬಾತನನ್ನು ಬಂಧಿಸಿ 15 ಲಕ್ಷ ಮೌಲ್ಯದ 264 ಗ್ರಾಂ. ಚಿನ್ನದೊಡವೆ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಯನಗರದ ನಿವಾಸಿಯಾಗಿರುವ ಯುವತಿಯು ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅರ್ಧಕ್ಕೆ ಮೊಟಕುಗೊಳಿಸಿದ್ದಳು. ಈ ಮಧ್ಯೆ ಆರೋಪಿ ಹರ್ಫಾತ್ ಆಕೆಯ ಸಹ ಯುವತಿಯ ಸ್ನೇಹಿತನಾಗಿದ್ದ. ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಡ್ಯಾನಿಶ್ ಎಂಬುನನೊಂದಿಗೆ ಯುವತಿ ಸ್ನೇಹ ಬೆಳೆಸಿಕೊಂಡಿದ್ದಳು. ಇವರಿಬ್ಬರಿಗೂ ಆರೋಪಿ ಕಾಮನ್ ಫ್ರೆಂಡ್ ಆಗಿದ್ದ. ಈ ಮಧ್ಯೆ ಯುವತಿ ಹಾಗೂ ಸ್ನೇಹಿತ ಡ್ಯಾನಿಶ್ ಇಬ್ಬರು ಅಂತರ ಕಾಯ್ದುಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಹರ್ಫಾತ್, ಯುವತಿಗೆ ಕರೆ ಮಾಡಿ ಡ್ಯಾನಿಶ್ ಜೊತೆವಿರುವ ಖಾಸಗಿ ವಿಡಿಯೋ ಹಾಗೂ ಫೋಟೋ ಇರುವುದಾಗಿ ಬೆದರಿಸಿದ್ದ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದ. ಮನೆಯಲ್ಲಿ ಚಿನ್ನಾಭರಣ ತಂದುಕೊಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
![Blackmail Case](https://etvbharatimages.akamaized.net/etvbharat/prod-images/23-08-2024/kn-02-jayanagara-case-7202806_23082024141249_2308f_1724402569_862.jpg)
ಮಗಳ ಮೇಲೆಯೇ ಕಳ್ಳತನದ ದೂರು ನೀಡಿದ್ದ ಪೋಷಕರು: ಮನೆಯಲ್ಲಿ ಚಿನ್ನಾಭರಣ ನಾಪತ್ತೆ ಸಂಬಂಧ ಮಗಳ ಮೇಲೆಯೇ ಪೋಷಕರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಸ್ನೇಹಿತರೊಂದಿಗೆ ಸೇರಿ ಮನೆಯಲ್ಲಿ ಮಗಳು ಚಿನ್ನಾಭರಣ ಕಳವು ಮಾಡಿರುವುದಾಗಿ ದೂರು ನೀಡಿದ್ದರು. ಯುವತಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಅಸಲಿ ಕಹಾನಿ ಹೊರಬಂದಿದೆ. ಖಾಸಗಿ ವಿಡಿಯೋ ಇರುವುದಾಗಿ ಬೆದರಿಸಿ ಮನೆಯಿಂದ ಚಿನ್ನಾಭರಣ ಕೊಡುವಂತೆ ಹರ್ಫಾತ್ ಒತ್ತಾಯಿಸಿದ್ದ. ಒತ್ತಡಕ್ಕೆ ಮಣಿದು ಹಂತ-ಹಂತವಾಗಿ ಚಿನ್ನಾಭರಣ ನೀಡಿದ್ದೆ ಎಂದು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಳು. ಈ ಸಂಬಂಧ ಆರೋಪಿಯನ್ನು ಬಂಧಿಸಿ ಪ್ರಶ್ನಿಸಿದಾಗ ಸುಲಿಗೆ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ. ಯುವತಿಯ ಖಾಸಗಿ ವಿಡಿಯೋ ಇರುವುದಾಗಿ ಸುಳ್ಳು ಹೇಳಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ: ಉಡುಪಿ; ಪ್ರಿಯಕರನ ಜೊತೆಗಿನ ಮಗಳ ಖಾಸಗಿ ವಿಡಿಯೋ ಹರಿಬಿಟ್ಟ ತಂದೆ: ದೂರು ನೀಡಿದ ತಾಯಿ - Daughter private video viral