ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ಚಂಡಮಾರುತಗಳ ಪ್ರಭಾವ ಕಡಿಮೆಯಾಗಿದ್ದು, ಒಂದೆರಡು ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ತಿಳಿಸಿರುವ ಹವಾಮಾನ ಇಲಾಖೆ, ರಾಜ್ಯದ ಮೂರು ಜಿಲ್ಲೆಗಳಿಗೆ ಮಾತ್ರ ಯೆಲ್ಲೋ ಘೋಷಿಸಿದೆ.
ದಕ್ಷಿಣ ಒಳನಾಡಿನ ಮಂಡ್ಯ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉಳಿದಂತೆ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಕೊಡಗು, ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ ಸಾಮಾನ್ಯ ಮಳೆ: ಬೆಂಗಳೂರು ನಗರ ಮತ್ತು ಸುತ್ತಮುತ್ತಲೀನ ಪ್ರದೇಶದಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಸಾಧಾರಣ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಮತ್ತು 20 ಡಿಗ್ರಿ ದಾಖಲಾಗಲಿದೆ. ನಗರದಲ್ಲಿ ನಿನ್ನೆಯಿಂದ 13.6 ಮಿ.ಮೀ. ಮಳೆ ದಾಖಲಾಗಿದೆ.
ರಾಜ್ಯಕ್ಕೆ ಚಂಡಮಾರುತ ಪ್ರಭಾವ ಕಡಿಮೆ: ''ವಾಯುವ್ಯ ಮತ್ತು ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಡಾನಾ ಚಂಡಮಾರುತ ಸೃಷ್ಟಿಯಾಗಿದ್ದರೂ ಅದರ ಪ್ರಭಾವ ಕರ್ನಾಟಕದ ಮೇಲೆ ಅಷ್ಟಾಗಿ ಆಗುವ ಲಕ್ಷಣಗಳಿಲ್ಲ. ಕೊಮೊರಿನ್ ಪ್ರದೇಶದ ಮೇಲಿದ್ದ ಗಾಳಿ ಚಂಡಮಾರುತವು ಈಗ ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಲಕ್ಷದ್ವೀಪ ಪ್ರದೇಶದ ಕಡೆ ವಾಲಿದ್ದು, ಅದರ ಪ್ರಭಾವ ಕೂಡ ರಾಜ್ಯಕ್ಕೆ ತಟ್ಟುವ ಸಾಧ್ಯತೆ ಕಡಿಮೆಯಿದೆ. ಸದ್ಯ ಹಿಂಗಾರು ಮಳೆ ದಕ್ಷಿಣ ಒಳನಾಡಿನ ಮೇಲೆ ಸಕ್ರಿಯವಾಗಿದೆ. ಕರಾವಳಿ ಕರ್ನಾಟಕದ ಮೇಲೆ ಸಾಮಾನ್ಯವಾಗಿದ್ದು, ಉತ್ತರ ಒಳಕರ್ನಾಟಕದ ಮೇಲೆ ದುರ್ಬಲವಾಗಿದೆ. ಇಂದು ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಅನೇಕ ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗಿದೆ'' ಎಂದು ಬೆಂಗಳೂರು ಹವಾಮಾನ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಗರ್ಭ ಗುಡಿ ಬಾಗಿಲು ಓಪನ್ ; 9 ದಿನ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ