ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ಇಂದು ಬೆಳಗ್ಗೆ ಮತ್ತು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮಧ್ಯಾಹ್ನ ನಾಮಪತ್ರ ಸಲ್ಲಿಸಲಿದ್ದಾರೆ.
ಮುಂಜಾನೆ 10.30ಕ್ಕೆ ಯಾಸೀರ್ ಖಾನ್ ಪಠಾಣ್ ಸರಳವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಬಳಿಕ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ತೆರಳಿ ಬಹಿರಂಗ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಅದ್ದೂರಿ ರ‍್ಯಾಲಿ ನಡೆಸಲಿರುವ ಯಾಸೀರ್ ಖಾನ್ ಪಠಾಣ್ಗೆ ಡಿಸಿಎಂ ಡಿಕೆಶಿ , ಸಚಿವರಾದ ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್, ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಸಾಥ್ ನೀಡಲಿದ್ದಾರೆ.
1 ಗಂಟೆಗೆ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ: ಇನ್ನು ಈಗಾಗಲೇ ಸರಳವಾಗಿ ನಾಮಪತ್ರ ಸಲ್ಲಿಸಿರುವ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಇಂದು ಬೃಹತ್ ರೋಡ್ ಶೋ ನಡೆಸುವ ಮೂಲಕ ಮಧ್ಯಾಹ್ನ 1 ಗಂಟೆಗೆ ಅದ್ಧೂರಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಸಿ.ಸಿ ಪಾಟೀಲ್ , ಮುರುಗೇಶ್ ನಿರಾಣಿ ಸೇರಿದಂತೆ ಹಲವು ನಾಯಕರು ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ.
ಶಿಗ್ಗಾಂವಿಯ ದ್ಯಾಮವ್ವನ ಪಾದಗಟ್ಟಿಯಿಂದ ಭರತ್ ಬೊಮ್ಮಾಯಿ ಪಾದಯಾತ್ರೆ ನಡೆಸಲಿದ್ದಾರೆ. ಹಳೇಪೇಟೆ ಮಾರ್ಗವಾಗಿ ಗಂಗೀಬಾವಿ ಕ್ರಾಸ್ವರೆಗೆ ಪಾದಯಾತ್ರೆ ನಡೆಸುವ ಭರತ್ ಬಳಿಕ ಚೆನ್ನಮ್ಮ ಸರ್ಕಲ್ ಮಾರ್ಗವಾಗಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಚೆನ್ನಮ್ಮ ಸರ್ಕಲ್ನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದ್ದು, ಪ್ರಮುಖ ನಾಯಕರು ಭರತ್ ಬೊಮ್ಮಾಯಿ ಪರ ಮತಯಾಚನೆ ಮಾಡಲಿದ್ದಾರೆ.
ಇದನ್ನೂ ಓದಿ: ಸಾಂಕೇತಿಕ ನಾಮಪತ್ರ ಸಲ್ಲಿಸಿದ ಭರತ್ ಬೊಮ್ಮಾಯಿ: ₹16.17 ಕೋಟಿ ಆಸ್ತಿ ವಿವರ ಘೋಷಣೆ
ಇದನ್ನೂ ಓದಿ: ಶಿಗ್ಗಾಂವಿ ಉಪಸಮರ: ಯಾಸಿರ್ ಖಾನ್ ಪಠಾಣ್ ಕಾಂಗ್ರೆಸ್ ಅಭ್ಯರ್ಥಿ