ಬೆಂಗಳೂರು: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್. ಡಿ. ರೇವಣ್ಣ ಹಾಗೂ ಇದೇ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಪ್ರಜ್ವಲ್ ರೇವಣ್ಣ ಸಿಐಡಿ ಕಚೇರಿಯಲ್ಲಿ ಇಂದು ವಿಚಾರಣೆ ಎದುರಿಸಿದರು.
ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಯಡಿಯೂರಪ್ಪ ವಿರುದ್ಧ ಕಳೆದ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು. ಸರ್ಕಾರದ ಆದೇಶ ಮೇರೆಗೆ ಸಿಐಡಿಗೆ ಪ್ರಕರಣ ವರ್ಗಾವಣೆ ಆಗಿತ್ತು. ಮೂರು ತಿಂಗಳ ಹಿಂದೆ ಅಧಿಕಾರಿಗಳು ನೀಡಿದ ನೋಟಿಸ್ಗೆ ಹಾಜರಾಗಿ ವಾಯ್ಸ್ ಸ್ಯಾಂಪಲ್ ನೀಡಿದ್ದರು. ಕಳೆದ ವಾರ ದಿಢೀರ್ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ನೋಟಿಸ್ ನೀಡಿದ್ದರು. ಅದರಂತೆ ಇಂದು ಸಿಐಡಿ ತನಿಖಾಧಿಕಾರಿಗಳ ಮುಂದೆ ಬಿಎಸ್ವೈ ಹಾಜರಾಗಿ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ಹೆಚ್ ಡಿ ರೇವಣ್ಣ ಕೂಡ ವಿಚಾರಣೆಗೆ ಹಾಜರು: ಕೆ.ಆರ್. ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿ, ಹೊರಬಂದಿದ್ದ ಹೆಚ್.ಡಿ. ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅದರಂತೆ ರೇವಣ್ಣ ಇಂದು ವಿಚಾರಣೆಗೆ ಹಾಜರಾದರು. ರೇವಣ್ಣ ಹೊಳೆನರಸೀಪುರ, ಕೆ.ಆರ್.ನಗರ ಹಾಗೂ ಸಿಐಡಿ ಸೇರಿ ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.
ಇನ್ನು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಜೂನ್ 10 ರಿಂದ 24ರ ವರೆಗೆ ನ್ಯಾಯಾಂಗ ಬಂಧನ ಆದೇಶ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣನನ್ನು ಬಾಡಿ ವಾರೆಂಟ್ ಮೇರೆಗೆ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಇದುವರೆಗೂ ಅಗತ್ಯ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನ ಕಲೆಹಾಕಿದ್ದು, ತನಿಖೆ ಮುಂದುವರೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸುಳ್ಯದ ಕಾಂತಮಂಗಲ ಶಾಲಾ ಜಗಳಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ - SULLIA CRIME