ಬೆಂಗಳೂರು: ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ಬೇಕಾಗಿದ್ದ ಆರೋಪಿ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ, ಮಹಿಳಾ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಜ್ವಲ್ ವಿರುದ್ಧ ಮೂರು FIR ದಾಖಲಿಸಲಾಗಿದೆ.
ಹಾಸನದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅವರ 33 ವರ್ಷದ ಮೊಮ್ಮಗ ಪ್ರಜ್ವಲ್, ಏಪ್ರಿಲ್ 27ರಂದು ದೇಶದಿಂದ ಪಾರಾರಿಯಾಗಿದ್ದರು. ಇಂದು (ಶುಕ್ರವಾರ) ಮುಂಜಾನೆ ವಿದೇಶದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮರಳಿದ್ದಾರೆ. ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ, ಮಹಿಳಾ ಪೊಲೀಸರೇ ಪ್ರಜ್ವಲ್ರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಬಂಧನ ವಾರಂಟ್ ಅನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯಲ್ಲಿ, ಇಬ್ಬರು ಐಪಿಎಸ್ ಅಧಿಕಾರಿಗಳಾದ ಸುಮನ್ ಡಿ.ಪೆನ್ನೇಕರ್ ಮತ್ತು ಸೀಮಾ ಲಾಟ್ಕರ್ ನೇತೃತ್ವದ ಮಹಿಳಾ ಪೊಲೀಸರು ಸಿದ್ಧವಾಗಿ ನಿಂತಿದ್ದರು. ಬಂಧನದ ನಂತರ ಮಹಿಳಾ ಪೊಲೀಸರು ಮಾತ್ರ ಇದ್ದ ಜೀಫ್ನಲ್ಲಿ ಹಾಸನ ಸಂಸದ ಪ್ರಜ್ವಲ್ರನ್ನು ಸಿಐಡಿ ಕಚೇರಿಗೆ ಕರೆದೊಯ್ಯಲಾಯಿತು.
ಎಸ್‌ಐಟಿಯ ಮೂಲಗಳ ಮಾಹಿತಿ: "ಪ್ರಜ್ವಲ್ ಅವರನ್ನು ಬಂಧಿಸಲು ಎಲ್ಲಾ ಮಹಿಳಾ ಅಧಿಕಾರಿಗಳನ್ನು ಪ್ರಜ್ಞಾಪೂರ್ವಕವಾಗಿ ಕಳುಹಿಸಲಾಗಿದೆ. ಏಕೆಂದರೆ, ಜೆಡಿಎಸ್ ನಾಯಕ ಮಹಿಳೆಯರೊಂದಿಗೆ ಸಂಸದನಾಗಿ ತನ್ನ ಸ್ಥಾನ ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅದೇ ಮಹಿಳೆಯರಿಗೆ ಎಲ್ಲಾ ಕಾನೂನು ಪ್ರಕ್ರಿಯೆಗಳ ಮೂಲಕ ಅವರನ್ನು ಬಂಧಿಸುವ ಅಧಿಕಾರವೂ ಇದೆ ಎಂಬ ಸಂದೇಶ ನೀಡಲಾಗಿದೆ" ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
''ಮಹಿಳಾ ಅಧಿಕಾರಿಗಳು ಯಾರಿಗೂ ಹೆದರುವುದಿಲ್ಲ ಎಂಬುದನ್ನು ಆರೋಪಿಗೆ ಮನವರಿಕೆ ಮಾಡುವುದಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿ ಮೂಲಕವೇ ಬಂಧನ ವಾರಂಟ್ ಪ್ರಕ್ರಿಯೆ ನಡೆಸಲಾಗಿದೆ'' ಎಂದು ಮೂಲಗಳು ತಿಳಿಸಿವೆ.