ಬೆಂಗಳೂರು: ಕೆ.ಆರ್. ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್. ಡಿ. ರೇವಣ್ಣ ಹಾಗೂ ಆಪ್ತ ಸಹಾಯಕ ಸತೀಶ್ ಬಾಬು ಬಂಧನವಾಗಿದ್ದು, ಇದೇ ಪ್ರಕರಣದಲ್ಲಿ ನಾಲ್ವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಜಯ್, ಕೀರ್ತಿ ತಿಮ್ಮಪ್ಪ ಹಾಗೂ ಮನು ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮಹಿಳೆಯನ್ನ ಅಪಹರಿಸಿದ ಆರೋಪದಲ್ಲಿ ಬಂಧಿತರಾಗಿರುವ ಸತೀಶ್ ಬಾಬು ಜೊತೆ ಸಂಪರ್ಕದಲ್ಲಿದ್ದರು ಅಲ್ಲದೆ ಕಿಡ್ನ್ಯಾಪ್ಗೆ ಸಹಕರಿಸಿದ್ದರು ಎಂಬ ಅಪಾದನೆ ಮೇರೆಗೆ ನಾಲ್ವರನ್ನ ವಶಕ್ಕೆ ಪಡೆಯಲಾಗಿದ್ದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಆರೋಪ ಮೇಲ್ನೋಟಕ್ಕೆ ಸಾಬೀತಾದರೆ ಬಂಧಿಸುವ ಸಾಧ್ಯತೆಯಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಮಹಿಳೆಯ ಅಪಹರಣ ಪ್ರಕರಣದಲ್ಲಿ ಮೇ 4ರಂದು ಶಾಸಕ ಹಾಗೂ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಬಳಿಕ ನಾಲ್ಕು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಲಾಗಿತ್ತು. ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಬುಧವಾರ (ನಿನ್ನೆ) ಅವರನ್ನು 17ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಮೇ 14ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು.