ಮೈಸೂರು: ''ಪಕ್ಷದ ಹೈಕಮಾಂಡ್ ನನ್ನನ್ನು ಗುರುತಿಸಿ ಹತ್ತು ವರ್ಷಗಳ ಕಾಲ ಸಂಸದರನ್ನಾಗಿ ಮಾಡಿದೆ. ನಾನು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ'' ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಜೊತೆಗೆ ಮೊದಲ ಬಾರಿಗೆ ಒಟ್ಟಿಗೆ ಕುಳಿತು ಮಾತನಾಡಿದರು.
''ಯದುವೀರ್ ಒಡೆಯರ್ ಅವರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದೆ. ನಾವು ನಾಮಪತ್ರ ಸಲ್ಲಿಸಲು, ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾ ಇದ್ದೇವೆ. ಯದುವೀರ್ ರಾಜರಾಗಿ ನಾಡಿಗೆ ಪರಿಚಿತ ಅಭ್ಯರ್ಥಿಯಾಗಿದ್ದು, ಅವರನ್ನು ಈಗ ಜನರು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇದು ತುಂಬಾ ದೊಡ್ಡ ಕ್ಷೇತ್ರವಾಗಿದೆ. ಈ ಕ್ಷೇತ್ರ ಮೈಸೂರಿನ ಕಡಕೊಳದಿಂದ ಮಡಿಕೇರಿಯ ಕೇರಳ ಬಾರ್ಡರ್ವರೆಗೂ 200 ಕಿ.ಮೀ. ದೂರ ಇದೆ. ಈ ಕ್ಷೇತ್ರದಲ್ಲಿ ಜನರನ್ನು ತಲುಪಲು ಮಾಧ್ಯಮ ಮುಖ್ಯವಾಗಿದೆ. ಯದುವೀರ್ಗೆ ಅಭಿನಂದನೆ ಸಲ್ಲಿಸುತ್ತೇನೆ'' ಎಂದರು.
''ಹತ್ತು ವರ್ಷಗಳ ಕಾಲ ಸಾಮಾನ್ಯ ಕಾರ್ಯಕರ್ತ ಆಗಿದ್ದ ನನಗೆ ಬಿಜೆಪಿ ಗುರುತಿಸಿ ಸಂಸದನಾಗಿ ಆಯ್ಕೆ ಮಾಡಿದೆ. ಈಗ ಬೇರೆವರನ್ನು ಪಕ್ಷ ಆಯ್ಕೆ ಮಾಡಿದೆ. ಇದನ್ನು ಸ್ವಾಗತಿಸುತ್ತೇನೆ ಎಲ್ಲವೂ ಹೈಕಮಾಂಡ್ ತೀರ್ಮಾನವಾಗಿದ್ದು, ನಾನು ಜನರಿಗೆ ಮತ್ತು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ'' ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಪಕ್ಷ ನನಗೆ ತಾಯಿ ಇದ್ದ ಹಾಗೆ: ಕಾಂಗ್ರೆಸ್ ಪಕ್ಷದಿಂದ ನಿಮಗೆ ಆಫರ್ ಇತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಇದೀಗ ಈ ಪ್ರಶ್ನೆ ಪ್ರಸ್ತುತ ಅಲ್ಲ. ನಮಗೆ ಯದುವೀರ್ ಗೆಲ್ಲುವುದಷ್ಟೇ ಮುಖ್ಯ. ದೇಶಕ್ಕೆ ಮೋದಿ ಬೇಕು, ಮೋದಿ ಪರವಾಗಿ ಕೈ ಎತ್ತಲು ಒಬ್ಬ ಮೈಸೂರು ವ್ಯಕ್ತಿ ಬೇಕು. ಅವರನ್ನ ನಾವು ಕಳುಹಿಸಿ ಕೊಡಬೇಕು ಅಷ್ಟೇ. ಪಕ್ಷ ನನಗೆ ತಾಯಿ ಇದ್ದ ಹಾಗೆ '' ಎಂದು ಸಂಸದ ಪ್ರತಾಪ್ ಸಿಂಹ ಮಾಧ್ಯಮದವರ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದರು.
ನಾನೇ ಅರಮನೆಯಿಂದ ಹೊರಗೆ ಬರುತ್ತೇನೆ - ಯದುವೀರ್ ಒಡೆಯರ್: ''ನೀವು ಅರಮನೆಗೆ ಬರಬೇಕಿಲ್ಲ. ನಾನೇ ಅರಮನೆಯಿಂದ ಜನರ ಬಳಿಗೆ ಬರುತ್ತೇನೆ. ಕಳೆದ 9 ವರ್ಷಗಳಿಂದ ನನ್ನನ್ನು ಒಳ್ಳೆಯ ರೀತಿಯಲ್ಲಿ ಸ್ವಾಗತ ಮಾಡಿದ್ದೀರಿ. ಇದೇ ರೀತಿ ಪ್ರೀತಿ, ವಿಶ್ವಾಸವನ್ನು ನನ್ನ ಮೇಲೆ ತೋರಿ. ಬಿಜೆಪಿ ತತ್ವ ಸಿದ್ಧಾಂತ ನನ್ನ ಆಲೋಚನೆಗಳ ಹಾಗೆಯೇ ಇವೆ. ಆ ಕಾರಣಕ್ಕಾಗಿ ನಾನು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡೆ'' ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.
''ನನ್ನ ತಂದೆಯನ್ನು ನಾಲ್ಕು ಬಾರಿ ಸಂಸದರಾಗಿ ಮಾಡಿದ್ದೀರಿ. ನನಗೆ ಎಲ್ಲ ಪಕ್ಷದೊಂದಿಗೂ ಸಂಬಂಧ ಇದೆ. ಆದರೆ, ಬಿಜೆಪಿಯೊಂದಿಗೆ ನನ್ನ ಪರಿಕಲ್ಪನೆಯು ಹೊಂದಾಣಿಕೆಯಾಗುವುದರಿಂದ, ಬಿಜೆಪಿ ಟಿಕೆಟ್ ಪಡೆದಿದ್ದೇನೆ. ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅರಮನೆಗೆ ಬರಬೇಕಿಲ್ಲ. ನಾನೇ ಅರಮನೆಯಿಂದ ಹೊರಗಡೆ ಬರುತ್ತೇನೆ. ನಾನು ರಾಜನೆಂದು ಹೇಳಿಲ್ಲ ಅರಮನೆಯಲ್ಲಿ ಇದು ಒಂದು ಪರಂಪರೆ ಅದನ್ನು ಬಿಟ್ಟು ನಾನು ಸಾಮಾನ್ಯನಾಗಿಯೇ ಇರುತ್ತೇನೆ. ನನ್ನನ್ನು ಸಂಸದ, ಜನರ ಪ್ರತಿನಿಧಿ ಎಂದು ಏನಾದ್ರೂ ಕರೆಯಿರಿ'' ಎಂದರು.
''ನನ್ನ ಚುನಾವಣಾ ಪ್ರಚಾರಕ್ಕೆ ತಾಯಿ ಪ್ರಮೋದಾದೇವಿ ಒಡೆಯರ್ ಬರುವ ಅಗತ್ಯವಿಲ್ಲ. ತಾಯಿಯ ಆಶೀರ್ವಾದದಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ಅವರ ಸಹಕಾರ ನನ್ನ ಮೇಲೆ ಸದಾ ಇರುತ್ತದೆ. ಅರಮನೆಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನುತ್ಮಾಕವಾಗಿ ಎಲ್ಲ ವಿಚಾರಗಳನ್ನು ತಾಯಿ ಪ್ರಮೋದಾದೇವಿ ಒಡೆಯರ್ ನೋಡಿಕೊಳ್ಳುತ್ತಾರೆ'' ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ನೀರಿಗಾಗಿ ಹಾಹಾಕಾರ: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ