ಬೆಂಗಳೂರು: ಪ್ರತಿ ವರ್ಷದಂತೆ ಈ ಸಲವೂ ವಿವಾಹ ವಾರ್ಷಿಕೋತ್ಸವಕ್ಕೆ ಉಡುಗೊರೆ ಕೊಡಲಿಲ್ಲ ಎಂಬ ಕಾರಣಕ್ಕೆ ಮಲಗಿದ್ದ ಪತಿಗೆ ಆತನ ಪತ್ನಿ ಚಾಕುವಿನಿಂದ ಇರಿದ ಘಟನೆ ಫೆಬ್ರವರಿ 27ರ ರಾತ್ರಿ ಬೆಳ್ಳಂದೂರಿನ ಜುನ್ನಸಂದ್ರದಲ್ಲಿ ನಡೆದಿದೆ. 37 ವರ್ಷದ ಗಾಯಾಳು ಪತಿಯ ಹೇಳಿಕೆ ಆಧರಿಸಿ, ಆತನ 35 ವರ್ಷ ವಯಸ್ಸಿನ ಪತ್ನಿಯ ವಿರುದ್ಧ ಬೆಳ್ಳಂದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರ ವ್ಯಕ್ತಿಯು ಜುನ್ನಸಂದ್ರದಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಿದ್ದರು. 'ಪ್ರತಿ ವರ್ಷ ವಿವಾಹ ವಾರ್ಷಿಕೋತ್ಸವದ ದಿನ ಪತ್ನಿಗೆ ಏನಾದರೂ ಗಿಫ್ಟ್ ನೀಡುತ್ತಿದ್ದೆ. ಆದರೆ, ಈ ವರ್ಷ ನನ್ನ ತಾತ ನಿಧನರಾಗಿದ್ದರಿಂದ ಹಿಂದಿನ ದಿನ ಗಿಫ್ಟ್ ಖರೀದಿಸಲು ಸಾಧ್ಯವಾಗಿರಲಿಲ್ಲ. ಅದೇ ಕೋಪದಲ್ಲಿದ್ದ ಪತ್ನಿ, ನಾನು ನಿದ್ದೆಗೆ ಜಾರಿದ್ದ ಸಮಯದಲ್ಲಿ ರಾತ್ರಿ 1:30ರ ಸುಮಾರಿಗೆ ಚಾಕುವಿನಿಂದ ಇರಿದಿದ್ದಾಳೆ' ಎಂದು ಪತಿ ಪೊಲೀಸರೆದುರು ಹೇಳಿಕೆ ನೀಡಿದ್ದಾರೆ.
ಇರಿತದಿಂದ ಪತಿಯ ಕೈಗೆ ಗಾಯವಾಗಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ದೂರುದಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಕು ಇರಿತ ಪ್ರಕರಣವಾದ್ದರಿಂದ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರನ್ವಯ ಗಾಯಾಳುವಿನ ಹೇಳಿಕೆ ಪಡೆದುಕೊಂಡ ಬೆಳ್ಳಂದೂರು ಠಾಣೆ ಪೊಲೀಸರು, ಮಾರ್ಚ್ 1ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಗಂಡ ಮತ್ತು ಹೆಂಡತಿಯನ್ನು ಪೊಲೀಸರು ಕೌನ್ಸಿಲಿಂಗ್ಗೆ ಒಳಪಡಿಸಿದ್ದಾರೆ.
ಕೃತ್ಯ ಒಪ್ಪಿಕೊಂಡ ಪತ್ನಿ: "ಕೃತ್ಯವೆಸಗಿರುವುದನ್ನು ಪತ್ನಿಯೂ ಒಪ್ಪಿಕೊಂಡಿದ್ದು, ತನ್ನ ತಾತ ತೀರಿಕೊಂಡಿದ್ದ ಕಾರಣ ಗಿಫ್ಟ್ ನೀಡಲು ಸಾಧ್ಯವಾಗಿರಲಿಲ್ಲ ಎಂದು ದೂರುದಾರ ಸಹ ಒಪ್ಪಿಕೊಂಡಿದ್ದಾನೆ. ಇಬ್ಬರೂ ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶ ನೀಡಲಾಗಿದೆ" ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ