ಹುಬ್ಬಳ್ಳಿ: ರಾಜ್ಯದಲ್ಲಿ ಮೂವರಿಗೆ ಡಿಸಿಎಂ ಹುದ್ದೆ ಬೇಕೆಂಬ ಕೂಗು ಹಾಕುವುದರಿಂದ ತೊಂದರೆ ಏನು? ನಾನು ಮೊದಲಿನಂದಲೂ ಈ ಕುರಿತು ಮಾತಾಡಿದ್ದೇನೆ. ಈ ಮಧ್ಯೆ ಚುನಾವಣೆ ಇರುವ ಕಾರಣಕ್ಕೆ ಎಐಸಿಸಿ ಅಧ್ಯಕ್ಷರು ಸಾರ್ವಜನಿಕವಾಗಿ ಈ ಬಗ್ಗೆ ಪ್ರಸ್ತಾಪ ಬೇಡ ಅಂದಿದ್ರು. ಅದರಿಂದ ನಾವು ಸುಮ್ನೆ ಇದ್ದೆವು ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ನಿನ್ನೆ ಮಾತಾಡಿದ್ದಾರೆ. ಅವರು ಮಾತಾಡಿದ್ದು ಸರಿ ಇದೆ. ಅದರಲ್ಲಿ ತಪ್ಪೇನಿದೆ. ಸತೀಶ್ ಜಾರಕಿಹೊಳಿ ಹೇಳಿಕೆಗೆ ನಮ್ಮ ಸಹಮತ ಇದೆ ಎಂದರು.
ಇನ್ನು, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ದರ್ಶನ್ ಮೊದಲು ಒಳ್ಳೆಯವನಿದ್ದ ಹಾಗಾಗಿ ಅವರನ್ನು ಕೃಷಿ ರಾಯಭಾರಿಯನ್ನಾಗಿ ಮಾಡಿರಬೇಕು. ಈಗ ಒಳ್ಳೆಯವನಲ್ಲ ಅಂತಾ ಗೊತ್ತಾದ ಮೇಲೆ ಯಾರೂ ರಾಯಭಾರಿ ಮಾಡಲ್ಲ. ಯಾರೇ ತಪ್ಪು ಮಾಡಲಿ, ಅಮಾಯಕರನ್ನ ಮೃಗೀಯ ರೀತಿ ಕೊಲೆ ಮಾಡ್ತಾರೆ ಅಂದ್ರೆ ಅದನ್ನು ಯಾರೂ ಒಪ್ಪಲ್ಲ. ಸೆಲೆಬ್ರಿಟಿ ಇರಬಹುದು, ಆದ್ರೆ ಈ ಕೃತ್ಯವನ್ನು ಎಲ್ಲರೂ ಖಂಡನೆ ಮಾಡ್ತಾರೆ. ಸೆಲೆಬ್ರಿಟಿ ಇದ್ದಾರೆ ಅಂದ್ರೆ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವನ್ನು ಯಾರೂ ಕೊಟ್ಟಿಲ್ಲ ಎಂದರು.
ಮುಂದೆ ಕಾಂಗ್ರೆಸ್ ಸರ್ಕಾರ ಇರಲ್ಲ ಅನ್ನೋ ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಹಗಲು ಕನಸು ಕಾಣ್ತಿದಾರೆ. ಬಿಜೆಪಿಯವರು ಹೇಳಬೇಕು, ಸುಮ್ನೆ ಹೇಳುತ್ತಿದ್ದಾರೆ. ಅವರು ಹೇಳಿ ತೃಪ್ತಿ ಪಟ್ಟುಕೊಳ್ಳಲಿ, ಸೂರಜ್ ರೇವಣ್ಣ ವಿಚಾರ ನನಗೆ ಗೊತ್ತಿಲ್ಲ ಎಂದರು.
ಪೆಟ್ರೋಲ್ ಬೆಲೆ ಏರಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಪ್ರತಿಭಟನೆ ಮಾಡಲಿ. ವಿಪಕ್ಷದವರು ಕೆಲಸ ಮಾಡಬೇಕಲ್ಲ. ನಮ್ಮ ಪಕ್ಕದ ರಾಜ್ಯದಲ್ಲಿ 8 ರಿಂದ 9 ರೂಪಾಯಿ ಜಾಸ್ತಿ ಇದೆ. ಸರ್ಕಾರಕ್ಕೆ ರೆವಿನ್ಯೂ ಬೇಕಲ್ಲ. ರೆವಿನ್ಯೂ ಇದ್ರೆ ಜನರ ಕೆಲಸ ಮಾಡಲು ಸಾಧ್ಯ. ರೆವಿನ್ಯೂಗಾಗಿ ಪೆಟ್ರೋಲ್-ಡಿಸೇಲ್ ಜಾಸ್ತಿ ಮಾಡಿದ್ದಾರೆ. ಇದನ್ನು ವಿರೋಧ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು. ಗ್ಯಾರಂಟಿ ನಿಲ್ಲಲ್ಲ. ಅದು ಸುಳ್ಳು ವದಂತಿ. ಸಿಎಂ ಖಡಾಖಂಡಿತವಾಗಿ ಗ್ಯಾರಂಟಿ ನಿಲ್ಲಸಲ್ಲ ಎಂದಿದ್ದಾರೆ. ಸುಮ್ಮೆ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು.
ಓದಿ: ಹುಬ್ಬಳ್ಳಿ: ಆಕಾಶ್ ಹಿರೇಮಠ ಕೊಲೆ ಪ್ರಕರಣ, 8 ಆರೋಪಿಗಳ ಬಂಧನ - Hubballi Youth Murder Case