ಬೆಳಗಾವಿ: ಪಂಚಮಸಾಲಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಮಾಡಲು ಹೇಳಿದ ಎಡಿಜಿಪಿ ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ದೌರ್ಜನ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ವಿಧಾನಸಭೆಯಲ್ಲಿಂದು ಲಾಠಿ ಚಾರ್ಜ್ ಬಗ್ಗೆ ಮಾತನಾಡಿದ ಅವರು, ಟ್ರಾಕ್ಟರ್, ಜೀಪ್ಗಳು ಬೆಳಗಾವಿಗೆ ಪ್ರವೇಶ ಮಾಡಲ್ವಂತೆ. ಯಾರೀ ಡಿಸಿ? ಯಾಕ್ರೀ ಅನುಮತಿ ಕೊಡಿಸಲ್ಲ?. ಒಬ್ಬ ಐಪಿಎಸ್ ಅಧಿಕಾರಿ ಯೂನಿಫಾರ್ಮ್ ಇಲ್ಲದೇ ಕೈಯಲ್ಲಿ ಲಾಠಿ ಹಿಡಿಯುತ್ತಾರಲ್ಲ? ನಾವು ನಿಮ್ಮ ಸಿಎಂ ವಿರುದ್ಧ ಇಲ್ಲ, ಅವರು ರಾಜ್ಯದ ಮುಖ್ಯಮಂತ್ರಿ, ಅವರು ನಿಮ್ಮ ಪಾರ್ಟಿ ಮುಖ್ಯಮಂತ್ರಿ ಅಲ್ಲ. ಆ ಅಧಿಕಾರಿಗೆ ಮಾನ ಮರ್ಯಾದೆ ಇದೆಯೇನ್ರೀ?. ಯಾರೋ ಫೋನ್ ಮಾಡಿದ್ರು ಅಂತಾ ಬಂದು ಲಾಠಿ ಚಾರ್ಜ್ ಮಾಡ್ರೋ ಅಂತಾರೆ. ನನ್ನ ಬಳಿ ವಿಡಿಯೋ ಇದೆ. ಈಗ ಪಂಚಮಸಾಲಿಯವರು ಕಲ್ಲು ಹೊಡೆದ್ರು ಎಂದು ಗೃಹ ಸಚಿವ ಪರಮೇಶ್ವರ್ ಹೇಳ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ನಡೆದ ಘಟನೆ ಬರ್ಬರವಾಗಿದೆ. ಪೊಲೀಸರಿಗೆ ಮನುಷ್ಯತ್ವ ಇಲ್ವಾ? ರಕ್ತ ಬರುವ ರೀತಿಯಲ್ಲಿ ಹೊಡೆಯುತ್ತಾರೆ. ಸಂಘಟನೆ ಮಾಡಿರುವ ನಮಗೆ ಹೊಡೀರಿ, ನಾವು ಯಾರ ಮೀಸಲಾತಿಯನ್ನು ಕೇಳುತ್ತಿಲ್ಲ. ಸಂವಿಧಾನಡಿಯಲ್ಲಿ ನಾವು ಕೇಳುತ್ತಿದ್ದೇವೆ. ನಾವು ಒಳ ಮೀಸಲಾತಿ ಮಾಡಿದ್ದೆವು, ಆದರೆ ಈ ಸರ್ಕಾರ ಅದನ್ನು ಜಾರಿಗೆ ತರುತ್ತಿಲ್ಲ ಎಂದರು.
ಎಡಿಜಿಪಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ನಮ್ಮ ಸರ್ಕಾರ ಬರುತ್ತದೆ. ಕೇಂದ್ರದಲ್ಲಿ ನಮ್ಮದು ಪ್ರಬಲ ಸರ್ಕಾರ ಇದೆ. ಆ ಅಧಿಕಾರಿ ವಿರುದ್ಧ ನಮ್ಮ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಲಾಠಿ ಚಾರ್ಜ್ ಮಾಡಿದ್ದೇ ಕಾನೂನುಬಾಹಿರ. ಆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಈ ರಾಜ್ಯದಲ್ಲಿ ಲಿಂಗಾಯತ ಹಾಗೂ ಹಿಂದೂಗಳಿಗೆ ಬದುಕೋಕೆ ಸಾಧ್ಯವಿಲ್ಲ ಅನ್ನೋ ವಾತಾವರಣ ನಿರ್ಮಾಣ ಆಗುತ್ತದೆ ಎಂದರು.
ಸಂತೋಷ್ ಲಾಡ್-ಯತ್ನಾಳ್ ಜಟಾಪಟಿ: ಈ ವೇಳೆ 2ಎ ಮೀಸಲಾತಿ ಹಕ್ಕೊತ್ತಾಯ ಕುರಿತು ಸಿಎಂ ಹೇಳಿಕೆಯನ್ನು ಯತ್ನಾಳ್ ಖಂಡಿಸಿದರು. ಪರಿಷತ್ನಲ್ಲಿ ಸಿಎಂ, 2ಎ ಮೀಸಲು ಕೇಳೋದು ಸಂವಿಧಾನ ವಿರೋಧಿ ಅಂದಿದ್ದಾರೆ. ಯಾಕೆ ಸಿಎಂಗೆ ಹಿಂದೂಗಳು ಅಂದ್ರೆ ದ್ವೇಷ?. ಒಕ್ಕಲಿಗರು, ಒಬಿಸಿ ಅಂದ್ರೆ ದ್ವೇಷ ಯಾಕೆ? ಸಿಎಂ ಒಂದೇ ಸಮುದಾಯದ ಓಲೈಕೆ ಮಾಡ್ತಾರೆ. ನಾವು ಮೂಲ ಭಾರತೀಯರು ಎಂದು ಹೇಳಿದರು.
ಯತ್ನಾಳ್ ಮಾತಿಗೆ ತಾಳ್ಮೆ ಕಳೆದುಕೊಂಡು ಸಿಟ್ಟಿಗೆದ್ದ ಸಚಿವ ಸಂತೋಷ್ ಲಾಡ್, ಈ ವೇಳೆ ಪರಸ್ಪರ ಏಕವಚನ ಪ್ರಯೋಗ ಮಾಡಿದರು. "ಮಾತಿನ ಮೇಲೆ ಹಿಡಿತವಿರಬೇಕು. ಹೇಗಂದ್ರೆ ಹಾಗೆ ಮಾತನಾಡಬಾರದು. ಸಿಎಂಗೆ ಹಿಂದೂ ವಿರೋಧಿ ಅಂತ ಪದೇ ಪದೆ ಯಾಕಂತೀರಾ?. ಮಾತೆತ್ತಿದರೆ ಹಿಂದೂ ವಿರೋಧಿ ಅನ್ನಬೇಡಿ, ಸಿಎಂ ಹಿಂದೂ ಅಲ್ವಾ?. ಹಿಂದೂ ವಿರೋಧಿ ಹೇಗಾಗ್ತಾರೆ" ಎಂದು ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜ್ಯದ ಹಲವೆಡೆ ಪಂಚಮಸಾಲಿ ಮೀಸಲಾತಿ ಕಿಚ್ಚು: ಸಿಎಂ ಹೇಳಿಕೆಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೆಂಡ
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಯತ್ನಾಳ್ ವಿರುದ್ಧದ ಪ್ರಕರಣ ರದ್ದು