ಬೆಂಗಳೂರು: ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ನಗರದ ಅನೇಕ ಅಪಾರ್ಟ್‌ಮೆಂಟ್‌ಗಳಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಆದ್ದರಿಂದ ಮಿತಿಗಿಂತ ಹೆಚ್ಚು ನೀರು ಬಳಕೆ ಮಾಡಿದರೆ ದಂಡ ವಿಧಿಸಲು ಅಪಾರ್ಟ್‌ಮೆಂಟ್‌ಗಳು ಮುಂದಾಗಿವೆ. ನೀರು ಪೂರೈಕೆ ವ್ಯತ್ಯಯವಾಗುತ್ತಿರುವುದರಿಂದ ಮಿತಿಯಲ್ಲಿ ಬಳಸುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಮಿತಿಗಿಂತ ಹೆಚ್ಚು ಬಳಸಿ ಪೋಲು ಮಾಡಿದರೆ ಅಂಥವರಿಗೆ ದಂಡ ವಿಧಿಸಲು ಮತ್ತು ನೀರಿನ ಬಳಕೆಯ ಮೇಲೆ ನಿಗಾ ಇಡಲು ಭದ್ರತಾ ಸಿಬ್ಬಂದಿ ನೇಮಕ ಮಾಡಲು ನಿರ್ಧರಿಸಿವೆ.
ನೀರಿನ ಪೋಲು, ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡುವುದರ ಜತೆಗೆ 5000 ರೂಪಾಯಿವರೆಗೆ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಒಟ್ಟಾರೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗುವುದು ಎಂದು ಹಲವು ಅಪಾರ್ಟ್ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹೇಳಿವೆ.
ಹೆಚ್ಚುತ್ತಿರುವ ನೀರಿನ ಬಿಕ್ಕಟ್ಟಿನ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿದ್ದು, ದೈನಂದಿನ ನೀರಿನ ಬಳಕೆ ವೇಳೆ ಹೆಚ್ಚು ಜಾಗರೂಕತೆ ವಹಿಸುವಂತೆ ಬೆಂಗಳೂರಿನ ಹಲವಾರು ಹೌಸಿಂಗ್ ಸೊಸೈಟಿಗಳು ನಿವಾಸಿಗಳಿಗೆ ಸೂಚನೆ ನೀಡಿವೆ. ವೈಟ್ ಫೀಲ್ಡ್, ಯಲಹಂಕ ಮತ್ತು ಕನಕಪುರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನೀರಿನ ತೀವ್ರ ಕೊರತೆ ಎದುರಾಗಿರುವುದು ಇದಕ್ಕೆ ಕಾರಣವಾಗಿದೆ.
ಇನ್ನು ನೀರಿನ ಕೊರತೆಯ ಪರಿಸ್ಥಿತಿ ನಿಭಾಯಿಸಲು ನೀರಿನ ಬಳಕೆಯನ್ನು ಶೇ.20 ರಷ್ಟು ಕಡಿಮೆ ಮಾಡುವಂತೆ ನಿವಾಸಿಗಳಿಗೆ ಸೂಚನೆ ನೀಡಲು ಸೊಸೈಟಿಗಳು ನಿರ್ಧರಿಸಿದ್ದು, ಮತ್ತೆ ಮತ್ತೆ ಉಲ್ಲಂಘಿಸಿದಲ್ಲಿ ಹೆಚ್ಚಿನ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿವೆ.
ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನೀರು ಸರಬರಾಜಾಗುತ್ತಿಲ್ಲ. ಸೊಸೈಟಿಯ ಅಧಿಕಾರಿಗಳು ಬೋರ್‌ವೆಲ್‌ಗಳಿಂದ ನೀರು ಸರಬರಾಜು ನಿರ್ವಹಣೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಬೋರ್‌ವೆಲ್‌ಗಳ ನೀರಿನ ಪ್ರಮಾಣ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವೈಟ್ ಫೀಲ್ಡ್ನಲ್ಲಿರುವ ಪಾಮ್ ಮೆಡೋಸ್ ಹೌಸಿಂಗ್ ಸೊಸೈಟಿಯ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜಲಕ್ಷಾಮ; ನೀರು ಸರಬರಾಜಿಲ್ಲದೆ ಪರಿತಪಿಸುತ್ತಿರುವ ಹೋಟೆಲ್ ಮಾಲೀಕರು