ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ವತಿಯಿಂದ ಕ್ಯಾನ್ಸರ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಗೃತಿ ಜಾಥಾ ನಡೆಸಲಾಯಿತು. 5 ಕಿಲೋ ಮೀಟರ್ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ಇಂದು ಬೆಳ್ಳಗೆ 6ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಸರ್ಜಿಕಲ್ ಸೊಸೈಟ್ ಆಫ್ ಬೆಂಗಳೂರು ಅಧ್ಯಕ್ಷರಾದ ಡಾ.ರಾಜಶೇಖರ ಸಿ.ಜಾಕ, ಹಿರಿಯ ಐಪಿಎಸ್ ಅಧಿಕಾರಿ ಲಾಭೂರಾಮ್, ಸ್ಯಾಂಡಲ್ವುಡ್ ತಾರೆಯರಾದ ಪ್ರೇಮ್, ವಿನಯ್ ರಾಜ್ ಕುಮಾರ್, ಗಿರಿರಾಜ್, ನಟಿ ಕಾರುಣ್ಯ ರಾಮ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸುಮಾರು 5 ಕಿಲೋ ಮೀಟರ್ ವಾಕಥಾನ್ ಕಂಠೀರವ ಕ್ರೀಡಾಂಗಣದಿಂದ ಆರಂಭವಾಗಿ ಹಡ್ಸನ್ ಸರ್ಕಲ್, ವಿಧಾನಸೌಧ, ಕೇಂದ್ರ ಪೋಸ್ಟ್ ಆಫೀಸ್ ಮೂಲಕ ಸಾಗಿ ಕಂಠೀರವ ಕ್ರೀಡಾಂಗಣದಲ್ಲಿ ಮುಕ್ತಾಯವಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ''ಆಹಾರ ಪದ್ಧತಿ, ಒತ್ತಡದ ಜೀವನ ಮತ್ತು ಬೊಜ್ಜು, ಕಲುಷಿತ ಪರಿಸರ, ದೇಹ ದಂಡಿಸದೇ ಇರುವ ಕಾರಣದಿಂದ ಕ್ಯಾನ್ಸರ್ ರೋಗ ಬರುತ್ತದೆ. ಪ್ರಪಂಚದಲ್ಲಿ ಅತ್ಯಂತ ಹಾನಿಕಾರಕವಾಗಿರುವ ಕಾಯಿಲೆಗಳಲ್ಲಿ ಕ್ಯಾನ್ಸರ್ ರೋಗವು ಒಂದು. ಕ್ಯಾನ್ಸರ್ ರೋಗದ ಆರಂಭಿಕ ಪತ್ತೆಯಿಂದ ಜೀವಗಳನ್ನು ಉಳಿಸಬಹುದು. ಪ್ರತಿಯೊಬ್ಬರು ಪ್ರತಿದಿನ ಒಂದು ಗಂಟೆ ಅವರ ಜೀವನಕ್ಕಾಗಿ ಮೀಸಲು ಇಡಬೇಕು, ಯೋಗ, ವಾಕಿಂಗ್, ವ್ಯಾಯಾಮ ಮಾಡುವುದರಿಂದ ಆರೋಗ್ಯವಂತರಾಗಿ ಇರಬಹುದು. ವಿಶ್ವ ಕ್ಯಾನ್ಸರ್ ದಿನದಂದು ಕ್ಯಾನ್ಸರ್ ಮುಕ್ತ ಸಮಾಜ ರಾಜ್ಯ ನಮ್ಮದಾಗಲಿ, ಇದಕ್ಕಾಗಿ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ'' ಎಂದರು.
ದೇಶದಲ್ಲಿ ಕ್ಯಾನ್ಸರ್ ರೋಗದಿಂದ ಲಕ್ಷಾಂತರ ಜನರು ಸಾವಿಗೀಡಾತ್ತಿದ್ದಾರೆ. ಮುಂಜಾಗ್ರತೆಯಾಗಿ ಆರೋಗ್ಯದ ಮೇಲೆ ನಿಗಾವಹಿಸದ ಕಾರಣ ಮತ್ತು ಕ್ಯಾನ್ಸರ್ ಕುರಿತು ಮಾಹಿತಿ ಇಲ್ಲದೇ ಇರುವ ಕಾರಣ ಜನರು ಬಲಿಯಾಗುತ್ತಿದ್ದಾರೆ. ಆದರೆ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ, ವೈದ್ಯಕೀಯ ಚಿಕಿತ್ಯೆ ಪಡೆದರೆ ಎಲ್ಲರಂತೆ ಜೀವನ ಸಾಗಿಸಬಹುದು. 9 ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್ ರೋಗ ಇರುವುದು ಅಂಕಿಅಂಶ ತಿಳಿಸುತ್ತದೆ.
ಇದನ್ನೂ ಓದಿ: ಗರ್ಭಕಂಠ ಕ್ಯಾನ್ಸರ್ಗೆ ಇಮ್ಯೂನೋಥೆರಪಿ ಪರಿಣಾಮಕಾರಿ: ಅಧ್ಯಯನ
ಮೊದಲ, ಎರಡನೇಯ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದರೆ ಸುಲಭವಾಗಿ ರೋಗ ಗುಣಪಡಿಸುವ ಸಾಧ್ಯತೆ ಇದೆ. ಕ್ಯಾನ್ಸರ್ ರೋಗದಿಂದ ಮುಕ್ತರಾಗಲು ಆಹಾರ ಪದ್ಧತಿ ಮತ್ತು ಜೀವನಶೈಲಿ ಬದಲಾವಣೆ ಮಾಡಿಕೊಳ್ಳಬೇಕು. ಪ್ರತಿದಿನ ಯೋಗ, ವ್ಯಾಯಾಮ ಮತ್ತು ವಾಕಿಂಗ್ ಹಾಗೂ ಉತ್ತಮ ಆಹಾರ ಸೇವನೆ ಮಾಡಬೇಕು. ದೇಶದಲ್ಲಿ ಪ್ರತಿವರ್ಷ 10 ಲಕ್ಷ ಕ್ಯಾನ್ಸರ್‌ಪೀಡಿತರಾಗುತ್ತಿದ್ದಾರೆ. ತೂಕ ಕಡಿಮೆ, ರಕ್ತಸ್ರಾವ, ಸತತವಾಗಿ ಜ್ವರ, ನೆಗಡಿ, ಕೆಮ್ಮು ಇದ್ದಲ್ಲಿ ವೈದ್ಯರಲ್ಲಿ ಬಂದು ತಪಾಸಣೆ ಮಾಡಿಸಿಕೊಳ್ಳಿ. ಪ್ರತಿ ಆರು ತಿಂಗಳಿಗೆ ಒಮ್ಮೆ ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಕ್ಯಾನ್ಸರ್ ಕುರಿತು ಅರಿವು ಮೂಡಿಸಲು ಇಂದು ಕ್ಯಾನ್ಸರ್ ಕುರಿತು ಜಾಗೃತಿ ಅಭಿಯಾನ, 5 ಕಿಲೋ ಮೀಟರ್ ವಾಕಥಾನ್ ಅಯೋಜಿಸಲಾಗಿದ್ದು, ಐದು ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.
ಇದನ್ನೂ ಓದಿ: ವಿಶ್ವ ಕ್ಯಾನ್ಸರ್ ದಿನ: ಭಾರತದ ಮೇಲೆ ಹೆಚ್ಚುತ್ತಿದೆ ಕ್ಯಾನ್ಸರ್ ಹೊರೆ