ದಾವಣಗೆರೆ: 2024ರ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಶುರುವಾಗಿದೆ. ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ 11 ರಾಜ್ಯಗಳ 93 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಎಲ್ಲೆಡೆ ಸುಗಮವಾಗಿ ಮತದಾನ ಪ್ರಕ್ರಿಯೆ ಸಾಗಿದೆ. ಇನ್ನು, ತಮ್ಮ ಹಕ್ಕು ಚಲಾಯಿಸಲು ಕೆಲವರು ಯುಕೆ, ಅಮೆರಿಕ, ಲಂಡನ್ದಿಂದ ಬಂದು ಮತದಾನ ಮಾಡುತ್ತಿದ್ದಾರೆ.
ಯುಕೆ (ಇಂಗ್ಲೆಂಡ್) ನಿಂದ ಆಗಮಿಸಿದ ಯುವಕ ತಮ್ಮ ಹಕ್ಕು ಚಲಾವಣೆ ಮಾಡಿದ್ರು. ಇನ್ನು ಕೆಲವರು ಅಮೆರಿಕದಿಂದ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಯುಕೆ (ಇಂಗ್ಲೆಂಡ್) ನಿಂದ ಆಗಮಿಸಿ ಮತದಾನ ಮಾಡಿದ ಯುವಕ ಅಭಿಷೇಕ್ ಲೋಕಿಕೆರೆ ಮಾತನಾಡಿ, ಒಂದೊಳ್ಳೆ ಅಭ್ಯರ್ಥಿಗೆ ಮತ ನೀಡಿ ಎಂದು ಇನ್ನಿತರ ಮತದಾರರಿಗೆ ಮನವಿ ಮಾಡಿದರು. ಯುವ ಮತದಾರ ಅಭಿಷೇಕ್ ಮೊದಲ ಬಾರಿಗೆ ಮತದಾನ ಮಾಡಿದ್ದು ವಿಶೇಷ. ದಾವಣಗೆರೆ ನಗರದ ವಿದ್ಯಾನಗರದ ಡಾಕ್ಟರ್ಸ್ ಕ್ಲಬ್ ಮತಗಟ್ಟೆಯಲ್ಲಿ ಅವರು ತಮ್ಮ ಹಕ್ಕು ಚಲಾಯಿಸಿದರು.
ಅಭಿಷೇಕ ಲೋಕಿಕೆರೆ ಹೇಳಿದಿಷ್ಟು: ಯುವ ಮತದಾರ ಅಭಿಷೇಕ್ ಪ್ರತಿಕ್ರಿಯಿಸಿ "ನಾನು ನನ್ನ ಹಕ್ಕು ಚಲಾವಣೆ ಮಾಡಲು ಲಂಡನ್ನಿಂದ ಆಗಮಿಸಿದ್ದೇನೆ. ನೀವು ಕೂಡ ವಿದೇಶದಲ್ಲಿ ಇದ್ರೆ ಅಥವಾ ಇಲ್ಲೇ ಇದ್ರೂ ಕೂಡ ತಪ್ಪದೇ ಮತಚಲಾವಣೆ ಮಾಡಿ. ದೇಶದ ಭವಿಷ್ಯಕ್ಕಾಗಿ ಮತದಾನ ಮಾಡಿ ಎಂದು ಕರೆ ನೀಡಿದರು.
ಇದಲ್ಲದೆ ರಾಘವೇಂದ್ರ ಕಮಲಕರ್ ಶೇಠ್ ಎಂಬುವರು ಅಮೆರಿಕದಿಂದ ಕುಟುಂಬ ಸಮೇತ ಆಗಮಿಸಿ ಮತಚಲಾವಣೆ ಮಾಡಿದ್ರು. ಮತದಾರರು ತಪ್ಪದೇ ಮತದಾನ ಮಾಡಿ ಎಂದು ಅಮೆರಿಕದಿಂದ ಬಂದ ಕುಟುಂಬ ಮನವಿ ಮಾಡಿತು. ಇನ್ನು ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ನ ನಿವಾಸಿಗಳಾದ ರೀತು ಹಾಗು ರಕ್ಷಾ ಇಬ್ಬರು ಕೂಡ ಅಮೆರಿಕದಿಂದ ದಾವಣಗೆರೆಗೆ ಆಗಮಿಸಿ ನಗರದ ಎಎನ್ಪಿ ಕಾನ್ವೆಂಟ್ನ ಮತಗಟ್ಟೆಯಲ್ಲಿ ಮತದಾನ ಮಾಡಿದ್ರು.
ಇನ್ನು ಅಮೆರಿಕದಿಂದ ಆಗಮಿಸಿದ ರಕ್ಷಾ ಅವರು ಕೂಡ ಮತದಾನ ಮಾಡಿ ಬಳಿಕ ಪ್ರತಿಕ್ರಿಯಿಸಿ, ಬಹಳ ಜನ ಇನ್ನು ಮತದಾನ ಮಾಡಿಲ್ಲ. ತಪ್ಪದೇ ಮತದಾನ ಮಾಡಿ. ನಿಮಗೆ ಯಾರು ಇಷ್ಟವೋ ಅಂತಹವರನ್ನು ಆಯ್ಕೆ ಮಾಡಿ ಎಂದು ಮತದಾರರಿಗೆ ಮನವಿ ಮಾಡಿದರು.