ಬೆಂಗಳೂರು: ಮುಡಾ ಸೈಟ್ ಕೊಡದೇ ಇರುವುದಕ್ಕೆ ಹೆಚ್.ವಿಶ್ವನಾಥ್ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ವಿಶ್ವನಾಥ್ ಒಬ್ಬ ಬ್ಲಾಕ್‌ಮೇಲರ್ ಎಂದು ಸಚಿವ ಬೈರತಿ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹೆಚ್.ವಿಶ್ವನಾಥ್ ಆಧಾರರಹಿತ ಆರೋಪ ಮಾಡ್ತಿದ್ದಾರೆ. ಅವರು ನನ್ನ ಹಾಗೂ ಸಿದ್ದರಾಮಯ್ಯ ಸೊಸೆಯ ವಿರುದ್ಧ 300 ಕೋಟಿ ರೂ. ಬೆಲೆ ಬಾಳುವ ಆಸ್ತಿ, ಪಬ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಇಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ. ಅದು ನೂರಕ್ಕೆ ನೂರು ಸುಳ್ಳು. ಆ ಭೂಮಿಯನ್ನು 1942ರಲ್ಲಿ ನಮ್ಮ ಮುತ್ತಾತ ಖರೀದಿಸಿದ್ದು. ಅದು ನಮಗೆ ಬಂದಿದೆ. ಹೆಣ್ಣೂರು ಮುಖ್ಯರಸ್ತೆಯಲ್ಲಿ 9.34 ಎಕರೆ ಹಾಗೂ 4.30 ಎಕರೆ ಜಮೀನು ಇದೆ. ಇದು ಪಿತ್ರಾರ್ಜಿತ ಜಾಗ ಎಂದರು.
ಸುಳ್ಳುಬುರುಕ ವಿಶ್ವನಾಥ್. ಆತ ನಿಮಾನ್ಸ್ ಸೇರುವುದೊಂದೇ ಬಾಕಿ ಇರುವುದು. ಅವರಿಗೆ ಬುದ್ದಿಭ್ರಮಣೆ ಆಗಿದೆ. ಈಗಾಗಲೇ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ. ಗ್ರಾಮ ಪಂಚಾಯತಿ ಸದಸ್ಯನಿಗಿರುವ ಕನಿಷ್ಠ ಜ್ಞಾನವೂ ಅವರಿಗೆ ಇಲ್ಲ. ಅವರ ವಿರುದ್ಧ ಇನ್ನೊಂದು ಕ್ರಿಮಿನಲ್ ಕೇಸ್, ನ್ಯಾಯಾಂಗ ನಿಂದನೆ ಕೇಸ್ ಹಾಕಲು ಮುಂದಾಗಿದ್ದೇವೆ. ವೈಯಕ್ತಿಕವಾಗಿ ದ್ವೇಷ ಮಾಡುವುದು ಎಷ್ಟು ಸರಿ?. ಬೇಷರತ್ ಆಗಿ ಸಿದ್ದರಾಮಯ್ಯ ಸೊಸೆ, ಸಿದ್ದರಾಮಯ್ಯ ಹಾಗೂ ನನ್ನ ಕ್ಷಮೆ ಕೇಳಬೇಕು. ಇಲ್ಲವಾದರೆ ನಾವು ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶೋಭಾ ಕರಂದ್ಲಾಜೆ ವಿರುದ್ಧ ದಾಖಲೆ ಬಿಡುಗಡೆ ಮಾಡುತ್ತೇನೆ: ಶೋಭಾ ಕರಂದ್ಲಾಜೆಗೆ ನಮ್ಮ ಮೇಲೆ ಸಿಟ್ಟಿದೆ. ಲೋಕಸಭೆ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಅವರಿಗೆ ಮುನ್ನಡೆ ಸಿಕ್ಕಿರಲಿಲ್ಲ. ಅವರ ಮೇಲೂ ಇ.ಡಿ. ಕೇಸ್ ಇದೆ. ಅವರ ವಿರುದ್ಧ ಇರುವ ಭ್ರಷ್ಟಾಚಾರ ಆರೋಪದ ಬಗ್ಗೆ ದಾಖಲೆ ಕಲೆ ಹಾಕಿ ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ - ಜೆಡಿಎಸ್ ಮುಖಂಡರಿಗೂ ಮುಡಾ ಬದಲಿ ನಿವೇಶನ ಹಂಚಿಕೆ : ಸಚಿವ ಬೈರತಿ ಸುರೇಶ್ - Muda site allotment