ಮಂಡ್ಯ: ಗಣೇಶ ನಿಮಜ್ಜನ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ಕಲ್ಲು ತೂರಾಟ ಉಂಟಾದ ನಾಗಮಂಗಲಕ್ಕೆ ಬಿಜೆಪಿ ಸತ್ಯಶೋಧನಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ಸಚಿವರಾದ ಭೈರತಿ ಬಸವರಾಜ್, ಕೆ. ಸಿ. ನಾರಾಯಣಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ. ಲಕ್ಷ್ಮೀ ಅಶ್ವಿನ್ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನೊಳಗೊಂಡ ಬಿಜೆಪಿ ಸತ್ಯಶೋಧನಾ ತಂಡ ಗಲಾಟೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು.
ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ್ ನೇತೃತ್ವದ ಬಿಜೆಪಿ ಸತ್ಯಶೋಧನಾ ತಂಡವು ಪ್ರತ್ಯಕ್ಷದರ್ಶಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಪಡೆದು ವರದಿ ತಯಾರಿಸಲಿದೆ. ಇದೇ ವೇಳೆ ಅಶ್ವತ್ಥ್ ನಾರಾಯಣ್ ಮಾತನಾಡಿ, ನಾಗಮಂಗಲದ ಕೋಮುಗಲಭೆ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸತ್ಯಾಸತ್ಯತೆ ಹೊರಬರಬೇಕು. ಈ ಘಟನೆ ಹಿಂದೆ ಯಾವುದೋ ಹಿನ್ನೆಲೆ ಇದೆ. ಇದರ ಆಳ-ಅಗಲ ತಿಳಿಯುವ ಕೆಲಸ ಮಾಡಬೇಕು. ಇದನ್ನ ಸಂಪೂರ್ಣವಾಗಿ ಅರಿಯಲು ಸತ್ಯಶೋಧನಾ ಸಮಿತಿ ರಚನೆ ಮಾಡಿಕೊಂಡಿದ್ದೇವೆ. ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಘಟನೆ ಹಿಂದಿರುವ ಕಾಣದ ಕೈಗಳ ಪತ್ತೆ ಮಾಡಬೇಕು. ಕೇರಳದ ಇಬ್ಬರು ಗಲಭೆಯಲ್ಲಿ ಭಾಗಿಯಾಗಿದ್ದಾರೆ. ಅವರು ಇಲ್ಲಿಗೆ ಯಾಕೆ ಬಂದಿದ್ದರು ಎಂಬುದು ಸೇರಿ ಎಲ್ಲದರ ಬಗ್ಗೆ ತನಿಖೆ ಆಗಬೇಕು. ನೊಂದವರಿಗೆ ಪರಿಹಾರ ಸಿಗಬೇಕು. ಆ ಪರಿಹಾರ ಕೊಡುವವರು ಯಾರು ಎಂಬುದರ ಮೇಲೆ ಚರ್ಚೆ ಆಗಬೇಕು. ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತುಷ್ಟೀಕರಣದ ರಾಜಕಾರಣ ಮಾಡ್ತಿದೆ. ಜನರಿಗೆ ನಿಜವಾದ ಸತ್ಯ, ನಿಜವಾದ ಪರಿಸ್ಥಿತಿ ತಿಳಿಸುವ ಕೆಲಸ ಆಗಬೇಕು ಎಂದು ಕಿಡಿಕಾರಿದ್ರು.
ಇನ್ನು ಮಾಜಿ ಸಚಿವ ಕೆ.ಸಿ. ನಾರಾಯಣ್ ಗೌಡ ಮಾತನಾಡಿ, ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ಇಂತಹ ಘಟನೆ ನಡೆಯಬಾರದಿತ್ತು. ನಮ್ಮ ಜಿಲ್ಲೆಯಲ್ಲಿ ಇಂತಹ ದೊಡ್ಡ ಘಟನೆ ನಡೆದಿರಲಿಲ್ಲ. ಇದು ರಾಜಕಾರಣ ಎಂದು ಎಲ್ಲರೂ ಹೇಳ್ತಿದ್ದಾರೆ. ಹಿಂದಿನ ಚುನಾವಣೆ ಎಫೆಕ್ಟ್ ಇದಕ್ಕೆಲ್ಲ ಕಾರಣ. ಘಟನೆಯಿಂದ ಸಾಕಷ್ಟು ಹಾನಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಯಾವತ್ತೂ ಕೋಮುಗಲಭೆ ಆಗಿರಲಿಲ್ಲ. ಇದರ ಹಿಂದೆ ಯಾರದೋ ಕೈವಾಡ ಇದೆ. ಈ ಬಗ್ಗೆ ವರದಿ ಸಲ್ಲಿಸಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಸೋಮವಾರ ಭಾಸ್ಕರ್ ರಾವ್ ಮತ್ತು ಸತ್ಯಶೋಧನಾ ತಂಡವು ಹಾನಿಗೊಳಗಾದ ಅಂಗಡಿಗಳಿಗೂ ಭೇಟಿ ನೀಡಿ ಮಾಹಿತಿ ಪಡೆಯಿತು. ಪೊಲೀಸ್ ಠಾಣೆ ಮುಂಭಾಗದ ಪಾತ್ರೆ ಅಂಗಡಿ, ಪ್ರಾವಿಷನ್ ಸ್ಟೋರ್, ಮೊಬೈಲ್ ಶಾಪ್ಗಳ ಪರಿಶೀಲನೆ ಮಾಡಿದರು. ಈ ವೇಳೆ ಬೆಂಗಳೂರು ವಕೀಲರ ಸಂಘದ ನಿಯೋಗವೂ ಸಾಥ್ ನೀಡಿತ್ತು.