ಬೆಂಗಳೂರು: ಅತ್ಯಾಚಾರ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕುರಿತಂತೆ ಅವರ ಮೊಬೈಲ್ನಲ್ಲಿರುವ ವಿಡಿಯೋ/ಚಿತ್ರಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ಪ್ರಜ್ವಲ್ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಿಸಲಾಗದು ಎಂದು ಪೀಠ ಮೌಖಿಕವಾಗಿ ತಿಳಿಸಿದೆ.
ಪ್ರಜ್ವಲ್ ಕಾರು ಚಾಲಕನ ಫೋನ್‌ನಿಂದ ಪಡೆದಿರುವ ಫೋಟೊ ಮತ್ತು ಎಲ್ಲ ವಿಡಿಯೋಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ.
ಅಲ್ಲದೆ, ಸುಪ್ರೀಂ ಕೋರ್ಟ್ ಗೋಪಾಲಕೃಷ್ಣ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಪ್ರಕಾರ ಹಾಲಿ ಪ್ರಕರಣಕ್ಕೆ ಅಗತ್ಯವಾದ ವಿಡಿಯೋ/ಚಿತ್ರಗಳನ್ನು ಪ್ರಾಸಿಕ್ಯೂಷನ್ ಒದಗಿಸಲಿದೆ. ಇದನ್ನು ಹೊರತುಪಡಿಸಿ ಬೇರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುವ ವಿಡಿಯೋ/ಚಿತ್ರಗಳನ್ನು ನೀಡಲಾಗದು. ನೀವು ಏನೋ ಮಾಡಬೇಕು ಎಂಬುದಕ್ಕೆ ಬೇರೊಬ್ಬ ಮಹಿಳೆಯ ಖಾಸಗಿತನದ ಉಲ್ಲಂಘನೆಯಾಗುವುದಕ್ಕೆ ಅವಕಾಶ ನೀಡಲಾಗದು ಎಂದು ಪೀಠ ಹೇಳಿದೆ.
ಅರ್ಜಿದಾರರು ಕೋರುತ್ತಿರುವ ದಾಖಲೆಗಳನ್ನು ಪ್ರಾಸಿಕ್ಯೂಷನ್ ಆಧರಿಸುತ್ತಿಲ್ಲ. ಸಂತ್ರಸ್ತೆಯ ಚಿತ್ರಗಳು ಮತ್ತು ಹೇಳಿಕೆ ಹೊರತುಪಡಿಸಿ ಬೇರೆ ಯಾವುದನ್ನೂ ಪ್ರಾಸಿಕ್ಯೂಷನ್ ಆಧರಿಸುವುದಿಲ್ಲ ಎಂದು ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರು ನಾನು ಯಾವುದೇ ಅಶ್ಲೀಲ ಚಿತ್ರಗಳನ್ನು ಒದಗಿಸಿ ಎಂದು ಕೋರಿಲ್ಲ. ಪ್ರಾಸಿಕ್ಯೂಷನ್ ಎಫ್‌ಎಸ್‌ಎಲ್ ವರದಿಯಲ್ಲಿ ಎಷ್ಟು ಅಶ್ಲೀಲ ಚಿತ್ರಗಳಿವೆ ಎಂದು ಉಲ್ಲೇಖಿಸಿಲ್ಲ. 2024ರ ಏಪ್ರಿಲ್ 30ರ ಮಹಜರು ಸಂದರ್ಭದಲ್ಲಿ ಮಾಜಿ ಕಾರು ಚಾಲಕನ ಫೋನ್ ಮತ್ತು ಸಿಮ್ ಜಪ್ತಿ ಮಾಡಲಾಗಿದೆ. ಅದನ್ನು ಒದಗಿಸಬೇಕು ಎಂದು ಕೋರಿದರು.
ಈ ವೇಳೆ ಸರ್ಕಾರಿ ವಕೀಲರು, ನ್ಯಾಯಾಲಯ ನಿರ್ದೇಶಿಸಿದರೆ ಕ್ಲೋನ್ ಮಾಡಿರುವ ಎಲ್ಲಾ ದಾಖಲೆಗಳನ್ನು ಒದಗಿಸಲಾಗುವುದು. ಆದರೆ, ಬೇರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವಿಳಂಬಿಸಲು ಇಂಥ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಹಾಲಿ ಸಲ್ಲಿಕೆ ಮಾಡಿರುವ ಅರ್ಜಿಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅರ್ಜಿ ಇತ್ಯರ್ಥಪಡಿಸಿತು.
ಓದಿ: ಮೂಡಾ ಮಾಜಿ ಆಯುಕ್ತ ನಟೇಶ್ ವಿರುದ್ಧ ಇಡಿ ತನಿಖಾ ಪ್ರಕ್ರಿಯೆ ಪ್ರಶ್ನಿಸಿದ್ದ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಪ್ರಕರಣ ಹಿನ್ನೆಲೆ: ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ನೀಡಿದ ದೂರಿನ ಅನ್ವಯ ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ಬಳಿಕ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ನೀಡಿದ ದೂರಿನ ಅನ್ವಯ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ನಂತರ ಬೆಂಗಳೂರಿನ ಸಿಐಡಿ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದೆದು, ಈಗಾಗಲೇ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಇದನ್ನೂ ಒದಿ: ಅತ್ಯಾಚಾರ ಆರೋಪ: ಪ್ರಜ್ವಲ್ ರೇವಣ್ಣ ವಿಚಾರಣೆಗೆ ವಿನಾಯಿತಿ ಕೋರಿದ್ದ ಮನವಿ ತಿರಸ್ಕರಿಸಿದ ಕೋರ್ಟ್