ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಕೊರಟಗೆರೆ ತಾಲೂಕಿನ ಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲಕ್ಕೆ ಇಂದು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ವರಮಹಾಲಕ್ಷ್ಮಿ ದೇವಿಯ ದರ್ಶನ ಪಡೆದರು.
ಗೊರವನಹಳ್ಳಿಯಲ್ಲಿ ಬೆಳಗ್ಗೆಯಿಂದಲೂ ಸಾವಿರಾರು ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ. ಮುಂಜಾನೆ 5:00 ಗಂಟೆಯಿಂದಲೇ ವಿಶೇಷ ಕುಂಕುಮಾರ್ಚನೆ ಸೇರಿದಂತೆ ವಿವಿಧ ಹೋಮ - ಹವನಗಳನ್ನು ನಡೆಸಲಾಗುತ್ತಿದೆ.
ದೇಗುಲದ ಕಾರ್ಯಕಾರಿ ಸಮಿತಿ ವತಿಯಿಂದ ಭಕ್ತರ ಅನುಕೂಲಕ್ಕಾಗಿ ಪೂರಕ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಬೆಂಗಳೂರು, ನೆರೆಯ ಆಂಧ್ರಪ್ರದೇಶ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಸಾವಿರಾರು ಜನರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಲು ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತ ಆಚರಣೆ ಮಾಡಲಾಗುತ್ತದೆ. ಸುಮಂಗಲಿಯರು ವಿಶೇಷವಾಗಿ ಈ ವ್ರತಾಚರಣೆ ಮಾಡುತ್ತಾರೆ. ವ್ರತಾಚರಣೆಯಿಂದ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು. ಸಿರಿ, ಸಂಪತ್ತು ವೃದ್ಧಿ, ಸಂತಾನ ಪ್ರಾಪ್ತಿ, ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ, ಸಂತಸ ಲಭಿಸುತ್ತದೆ ಎಂಬ ನಂಬಿಕೆಯಿದೆ.