ಕಾರವಾರ: ಮೂರು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಟಫ್ ಫೈಟ್ ನೀಡಿದೆ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ನಿಂದ ಡಾ.ಅಂಜಲಿ ನಿಂಬಾಳ್ಕರ್ ಕಣದಲ್ಲಿದ್ದಾರೆ. ಪ್ರಬುದ್ಧ ಮತದಾರರಿರುವ ಈ ಕ್ಷೇತ್ರದಲ್ಲಿ ಈ ಬಾರಿ ವಿಶ್ಲೇಷಣೆ ಕಷ್ಟಸಾಧ್ಯವಾಗುವಷ್ಟರ ಮಟ್ಟಿಗೆ ಹಣಾಹಣಿ ಇದೆ. ಅಳೆದು ತೂಗಿದರೂ ಜನರು ಮತ್ತು ಕಾರ್ಯಕರ್ತರಿಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಹೀಗಾಗಿ, ಜೂನ್ 4ರ ಫಲಿತಾಂಶದ ಮೇಲೆ ಕುತೂಹಲ ಹೆಚ್ಚಾಗಿದೆ.
ಮೇ 7ರಂದು ನಡೆದ ಚುನಾವಣೆಯಲ್ಲಿ ಕ್ಷೇತ್ರದ ಇತಿಹಾಸದಲ್ಲಿಯೇ ಗರಿಷ್ಠ ಶೇ.76.53ರಷ್ಟು ಮತದಾನ ದಾಖಲಾಗಿದೆ. ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಿದ್ದಾಜಿದ್ದಿ ಗೋಚರಿಸುತ್ತಿದೆ. ಕಾಂಗ್ರೆಸ್ ಹುರಿಯಾಳು ಡಾ.ಅಂಜಲಿ ನಿಂಬಾಳ್ಕರ್ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮೂರು ದಶಕಗಳ ಬಳಿಕ ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಇಡಲು ಕ್ಷೇತ್ರದಾದ್ಯಂತ ಭಾರೀ ಪ್ರಚಾರ ಕೈಗೊಂಡಿದ್ದರು.
ಮರಾಠಿ ಸಮುದಾಯದ ಬೆಂಬಲ: ಖಾನಾಪುರದ ಮೂಲದ ಅಂಜಲಿ ನಿಂಬಾಳ್ಕರ್ ಮರಾಠಿ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ಇದೇ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಇವರಿಗೆ ಪ್ಲಸ್. ಪ್ರತೀ ಬಾರಿ ಬಿಜೆಪಿ ಪರ ಈ ಮತಗಳು ವಾಲುತ್ತಿದ್ದವು. ಆದರೆ ಈ ಬಾರಿ ಸಮುದಾಯದ ಅಭ್ಯರ್ಥಿಗೆ ಬೆಂಬಲಿಸಲಿವೆ ಎಂಬುದೊಂದು ವಿಶ್ಲೇಷಣೆ.
ಅಲ್ಲದೇ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಪೈಕಿ 5ರಲ್ಲಿರುವ ಕಾಂಗ್ರೆಸ್ ಶಾಸಕರು ಲೀಡ್ ತರಬಹುದು. ಸಚಿವರು, ಮಾಜಿ ಶಾಸಕರ, ಮುಖಂಡರ ಬೆಂಬಲ, ಗ್ಯಾರಂಟಿ ಯೋಜನೆಗಳ ಬಲ ಕಾಂಗ್ರೆಸ್ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ಡಾ.ಅಂಜಲಿ ನಿಂಬಾಳ್ಕರ್ ಈ ಹಿಂದೆ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 36,649 ಮತಗಳ ಅಂತರದಿಂದ ಜಯಿಸಿದ್ದರು. ಆದರೆ 2023ರಲ್ಲಿ ಸೋಲು ಕಂಡಿದ್ದಾರೆ.
ಅನಂತಕುಮಾರ್ ಹೆಗಡೆ ಅಸಮಾಧಾನದ ಎಫೆಕ್ಟ್ ಏನು?: ಇನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಹೈಕಮಾಂಡ್ ಅಚ್ಚರಿಯ ಘೋಷಣೆಯೊಂದಿಗೆ ಮೊದಲ ಬಾರಿಗೆ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಸತತ ಗೆಲುವು ಸಾಧಿಸುತ್ತಿದ್ದರೂ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಈ ಬಾರಿ ಹೈಕಮಾಂಡ್ ಕೈಬಿಟ್ಟು, ಕಾಂಗೇರಿ ಅವರಿಗೆ ಅವಕಾಶ ನೀಡಿದೆ. ಬಹಿರಂಗವಾಗಿ ಅನಂತಕುಮಾರ್ ಹೆಗಡೆ ಪ್ರಚಾರಕ್ಕೆ ಬರದೇ ಅಸಮಾಧಾನ ತೋರಿರುವುದು ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ: ಹೊಸ ಅಭ್ಯರ್ಥಿಗಳ ಮಧ್ಯೆ ಹಣಾಹಣಿ; ಬಿಜೆಪಿ ಕೋಟೆಯಲ್ಲಿ ಮತದಾರರ ಗುಟ್ಟೇನು? - DAKSHIN KANNADA CONSTITUENCY
ಟಿಕೆಟ್ ಘೋಷಣೆ ಬಳಿಕ ಜಿಲ್ಲೆಯಾದ್ಯಂತ ಪ್ರಚಾರ ನಡೆಸಿದ್ದ ಕಾಗೇರಿ ಈ ಬಾರಿಯೂ ಬಿಜೆಪಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಚಿರಪರಿಚಿತರಾಗಿದ್ದ ಅವರು ಟಿಕೆಟ್ ಘೋಷಣೆಯಾದ ದಿನದಿಂದಲೂ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸಿದ್ದರು. ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಕೈ ಹಿಡಿದಿರುವ ಹಿಂದುತ್ವ, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಮುಂದಿಟ್ಟು ಪ್ರಚಾರ ನಡೆಸಿ, 3 ದಶಕಗಳಿಂದ ಸತತವಾಗಿ ಗೆಲ್ಲುತ್ತಿರುವ ಕ್ಷೇತ್ರವನ್ನು ಉಳಿಸಿಕ್ಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಅಲ್ಲದೇ ಸ್ವತಃ ಪ್ರಧಾನಿಯೇ ಶಿರಸಿಗೆ ಆಗಮಿಸಿ ಪರ ಪ್ರಚಾರ ನಡೆಸಿದ್ದರಿಂದ ಈ ಬಾರಿಯೂ ದಾಖಲೆ ಮತಗಳಿಂದ ಗೆಲ್ಲುವುದು ನಿಶ್ಚಿತ ಎಂಬುದು ಕಾರ್ಯಕರ್ತರ ಮಾತು.
ವಿಶ್ವೇಶ್ವರ ಹೆಗಡೆ ಕಾಗೇರಿ ಅಂಕೋಲಾ ಹಾಗೂ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಒಟ್ಟು ಏಳು ಬಾರಿ ಸ್ಪರ್ಧಿಸಿ ತಲಾ 3 ಬಾರಿ ಗೆದ್ದು ಒಟ್ಟು 6 ಬಾರಿ ಶಾಸಕರಾಗಿದ್ದರು. ಕರ್ನಾಟಕ ವಿಧಾನಸಭೆಯ 22ನೇ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಭೀಮಣ್ಣ ನಾಯ್ಕ ವಿರುದ್ಧ ಸೋಲು ಅನುಭವಿಸಿದ್ದರು.
ಕಳೆದ ಮೂರು ದಶಕಗಳಿಂದ ಬಿಜೆಪಿ ಪರ ಲೆಕ್ಕಾಚಾರಗಳು ಕೇಳಿಬರುತ್ತಿದ್ದವು. ಆದರೆ ಈ ಬಾರಿ ಜೂನ್ 4ವರೆಗೆ ಕಾಯುವ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪೂಜಾರಿ, ಹೆಗ್ಡೆ ಮಧ್ಯೆ 'ಜಯ' ಯಾರಿಗೆ? - Udupi Chikkamagalur Constituency