ಶಿರಸಿ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬ್ಯುಸಿಯಾಗಿದ್ದ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಎರಡನೇ ಹಂತದ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ರಿಲಾಕ್ಸ್ ಮೂಡ್ಗೆ ಜಾರಿದ್ದಾರೆ. ಚುನಾವಣೆಯ ನಂತರ ಕಾಗೇರಿ ವಿದೇಶ ಅಥವಾ ಪ್ರವಾಸಿ ತಾಣಗಳಿಗೆ ಭೇಟಿ ನೀಡಿಲ್ಲ. ಇದರ ಬದಲು ತಮ್ಮ ತೋಟದ ಕೆಲಸದಲ್ಲಿ ತೊಡಗಿದ್ದಾರೆ.
ಇಂದು ಬೆಳಗ್ಗೆ ತೋಟಕ್ಕೆ ತೆರಳಿದ ಕಾಗೇರಿ ಒಂದು ಸುತ್ತಿನ ತಿರುಗಾಟ ನಡೆಸಿದರು. ಅಲ್ಲಿರುವ ಅಡಿಕೆ ಮರ ಮತ್ತು ವಿವಿಧ ಗಿಡಗಳಿಗೆ ನೀರುಣಿಸಿದರು. ಕೊಟ್ಟಿಗೆಯಲ್ಲಿರುವ ದನಗಳಿಗೆ ಮೇವು, ಗೂಡಿನಲ್ಲಿರುವ ಗಿಳಿಗಳಿಗೆ ಆಹಾರ ಒದಗಿಸಿದರು. ಹೀಗೆ ತೋಟದ ಕೆಲಸ ಮಾಡುತ್ತಾ ಕಾಲ ಕಳೆದರು. ಇದಾದ ನಂತರ ಎಲ್ಲ ಕೆಲಸ ಮುಗಿಸಿಕೊಂಡು ಕಚೇರಿಗೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕಾಗೇರಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಕ್ಷೇತ್ರದಿಂದ ಲೋಕಸಭೆಗೆ ಸ್ಫರ್ಧಿಸಿದ್ದಾರೆ. ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಶಿರಸಿ ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಎದುರು 9,017 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಇದರೊಂದಿಗೆ ಸೋಲಿಲ್ಲದ ಸರದಾರನೆಂಬ ಖ್ಯಾತಿ ಪಡೆದಿದ್ದ ಕಾಗೇರಿ ಮೊದಲ ಬಾರಿಗೆ ಹಿನ್ನಡೆಯಾಗಿತ್ತು.
ಸದ್ಯ ರಾಜ್ಯದಲ್ಲಿ ಎರಡೂ ಹಂತದ ಲೋಕಸಭೆ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದ್ದು 28 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಜೂನ್ 4ರಂದು ಹೊರಬೀಳಲಿದೆ.
ಇದನ್ನೂ ಓದಿ: ಧಾರವಾಡ ಲೋಕಸಭೆಗೆ ಶಾಂತಯುತ ಮತದಾನ: ಮತಪೆಟ್ಟಿಗೆ ಸೇರಿದ 18 ಅಭ್ಯರ್ಥಿಗಳ ಭವಿಷ್ಯ - Dharwad Turnout