ದಾವಣಗೆರೆ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸೌಭಾಗ್ಯ ಎಸ್.ಬೀಳಗಿಮಠ್ ದೇಶದಲ್ಲೇ 101ನೇ ರ‍್ಯಾಂಕ್ ಪಡೆದಿದ್ದಾರೆ. ಮಗಳ ಸಾಧನೆ ಖುಷಿ ತಂದಿದೆ ಎಂದು ಪೋಷಕರು ತಿಳಿಸಿದರು.
ಸೌಭಾಗ್ಯ ಬೀಳಗಿಮರ್ ಮೊದಲ ಪ್ರಯತ್ನದಲ್ಲೇ ಅತ್ಯಂತ ಕಠಿಣವೆಂದೇ ಹೇಳಲಾಗುವ ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ನಗರದ ಆಂಜನೇಯ ಬಡಾವಣೆ ನಿವಾಸಿಯಾದ ಇವರು, ಧಾರವಾಡದಲ್ಲಿ ನೆಲೆಸಿದ್ದಾರೆ. ಸೌಭಾಗ್ಯ ಅವರು ಶರಣಯ್ಯ ಮತ್ತು ಶರಣಮ್ಮ ದಂಪತಿಯ ಪುತ್ರಿ. ಶರಣಯ್ಯ ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನವರು. ರೈತರಾಗಿದ್ದು, ನರ್ಸರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸೌಭಾಗ್ಯ ಬಿಎಸ್ಸಿ ಅಗ್ರಿ ಪದವಿ ಪಡೆದಿದ್ದಾರೆ.
ಸಾಧನೆಯ ಸಂಭ್ರಮ: 'ಈಟಿವಿ ಭಾರತ್' ಜೊತೆಗೆ ಪೋಷಕರು ಮಾತನಾಡಿ, ''ಮಗಳು ತುಂಬಾ ವಿಧೇಯಳು. ಮೊದಲಿನಿಂದಲೂ ಇದೇ ರೀತಿಯಾಗಿ ಬೆಳೆದಿದ್ದಾಳೆ. ಧಾರವಾಡದಲ್ಲಿ ಸೂಕ್ಷ್ಮಜೀವಿಶಾಸ್ತ್ರ ಪ್ರಾಧ್ಯಾಪಕರಾದ ಅಶ್ವಿನಿ ಮೇಡಂ ಜೊತೆಗೆ ನೆಲೆಸಿದ್ದರು. ಇವರೇ ನಮ್ಮ ಮಗಳನ್ನು ತಮ್ಮ ಮಗಳಂತೆ ನೋಡಿಕೊಂಡಿದ್ದಾರೆ. ಯುಪಿಎಸ್‌ಸಿ ಸಂದರ್ಶನ ಸಂದರ್ಭದಲ್ಲೂ ನಾವು ಹೋಗಿರಲಿಲ್ಲ. ಅಶ್ವಿನಿ ಮೇಡಂ ಅವರೇ ಹೋಗಿದ್ದರು. ಅಷ್ಟೇ ಅಲ್ಲ, ನಾವು ಮಗಳಿಗೆ ಹೈದರಾಬಾದ್, ದೆಹಲಿಯಂತಹ ಯಾವುದೇ ಕೋಚಿಂಗ್‌ಗೆ ಕಳುಹಿಸಿಲ್ಲ. ಇದಕ್ಕಾಗಿ ಹತ್ತು ಪೈಸೆಯನ್ನೂ ಖರ್ಚು ಮಾಡಿಲ್ಲ. ಮಗಳ ಪ್ರತಿಭೆಯನ್ನು ಗುರುತಿಸಿ, ಮಾತೃ ಹೃದಯದಿಂದ ಅಶ್ವಿನಿ ಮೇಡಂ ಸಹಾಯ ಮಾಡಿದ್ದಾರೆ'' ಎಂದು ಶರಣಯ್ಯ ತಿಳಿಸಿದರು.
''ಸೌಭಾಗ್ಯ ಪ್ರಾಥಮಿಕ ಶಾಲೆಯಿಂದಲೂ ಪ್ರತಿಭಾವಂತೆ. ಪ್ರೌಢ ಮತ್ತು ಪದವಿ ಶಿಕ್ಷಣದ ಹಂತದಲ್ಲೇ ಯುಪಿಎಸ್‌ಸಿ ಪರೀಕ್ಷೆಯ ಬಗ್ಗೆ ಒಲವು ತೋರಿದ್ದಳು. ಧಾರವಾಡ ಕೃಷಿ ವಿಶ್ವವಿದ್ಯಾಲಯದರಿಂದ ಬಿಎಸ್ಸಿ ಅಗ್ರಿ ಪಡೆದಿದ್ದಾಳೆ. ಮಕ್ಕಳೊಂದಿಗೆ ಪೋಷಕರು ಸ್ನೇಹಿತರಂತೆ ಇರಬೇಕು. ಪೋಷಕರು ಮಕ್ಕಳ ಸಂಪರ್ಕದಲ್ಲಿ ಇರಬೇಕು'' ಎಂದರು.
ತಾಯಿ ಶರಣಮ್ಮ ಮಾತನಾಡಿ, ''ಮಗಳು ಪಟ್ಟ ಕಷ್ಟಕ್ಕೆ ಫಲ ಸಿಕ್ಕಿದೆ. ಶಾಲಾ ಹಂತದಲ್ಲೂ ಸರ್ಕಾರದಿಂದ ಸಿಕ್ಕ ಸವಲತ್ತು ಮತ್ತು ಹಮ್ಮಿಕೊಂಡ ಸ್ಪರ್ಧೆಗಳೂ ಸಹ ಆಕೆಯ ಸಾಧನೆಗೆ ಸಹಕಾರಿಯಾಗಿವೆ'' ಎಂದು ತಿಳಿಸಿದರು.
ಇದನ್ನೂ ಓದಿ: ಯುಪಿಎಸ್‌ಸಿ: ಹುಬ್ಬಳ್ಳಿಯ ವಿಜೇತಾ 100ನೇ ರ‍್ಯಾಂಕ್, ಧಾರವಾಡದ ಸೌಭಾಗ್ಯ 101ನೇ ರ‍್ಯಾಂಕ್ - UPSC Achievers