ಬೆಂಗಳೂರು: ಕಳಪೆ ಗುಣಮಟ್ಟದ ಐವಿ ದ್ರಾವಣ ಕಳಿಸಿಕೊಟ್ಟಿದ್ದೇ ಬಾಣಂತಿಯರ ಸಾವಿಗೆ ಕಾರಣ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆರೋಪಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ವಿಚಾರ ಬಂದಾಗ ಬಳ್ಳಾರಿ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ಕೇಂದ್ರದ ಮೇಲೆ ಪದೇ ಪದೇ ಕಾಂಗ್ರೆಸ್ ನಾಯಕರು ಆರೋಪ ಮಾಡ್ತಾರೆ. ಮಳೆ ಜಾಸ್ತಿ ಆದ್ರೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡ್ತಾರೆ ಎಂದು ಕಿಡಿಕಾರಿದರು.
ಐವಿ ದ್ರಾವಣ ಸ್ಯಾಂಪಲ್ಗೆ ಕೇಂದ್ರ ಒಪ್ಪಿಗೆ ನೀಡಿದೆ ಎನ್ನುತ್ತಾರೆ. ಪಕ್ಕದ ರಾಜ್ಯದಲ್ಲಿ ಯಾಕೆ ಈ ರೀತಿಯ ಸಮಸ್ಯೆ ಆಗಲಿಲ್ಲ. ತೆಲಂಗಾಣದಲ್ಲಿ ಅವರದೇ ಸರ್ಕಾರ ಇದೆಯಲ್ಲವೇ?, ಅಲ್ಲಿ ಯಾಕೆ ಈ ರೀತಿಯ ಸಮಸ್ಯೆ ಆಗಿಲ್ಲ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂಪೂರ್ಣ ವಿಫಲರಾಗಿದ್ದಾರೆ. ಆರೋಗ್ಯ ಸಚಿವರು ಬರೀ ಸಿಎಂ ಹಿಂದೆ ಓಡಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಯಾವ ಸಚಿವರೂ ಬಳ್ಳಾರಿ ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಸ್ಥಳಕ್ಕೆ ಭೇಟಿ ನೀಡಿ ಅಂತ ಸಿಎಂ ಹೇಳಿದ್ದಾರೆ. ಆದರೂ ಸಚಿವರು ಇದುವರೆಗೂ ಆಸ್ಪತ್ರೆಗೆ ಭೇಟಿ ನೀಡ್ತಿಲ್ಲ ಎಂದು ಹೇಳಿದರು.
ಸುಳ್ಳುಗಾರ ಸಿದ್ದರಾಮಯ್ಯ : ನಬಾರ್ಡ್ನಿಂದ ರಾಜ್ಯಕ್ಕೆ ಹಣ ಕಡಿಮೆ ಮಾಡಿಲ್ಲ. ಇಡೀ ದೇಶಕ್ಕೆ ಕಡಿಮೆಯಾಗಿದೆ. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ ಎಂದಿದ್ದಾರೆ.
ಬ್ಯಾಂಕ್ಗಳು ಕೃಷಿ ವಲಯಕ್ಕೆ ಉತ್ತಮವಾಗಿಯೇ ಸಾಲ ಕೊಡುತ್ತಿವೆ. ರಾಷ್ಟ್ರೀಯ ಬ್ಯಾಂಕ್ಗಳು, ಸಹಕಾರ ಬ್ಯಾಂಕ್ಗಳು 4% ಬಡ್ಡಿ ದರದಲ್ಲೇ ಸಾಲ ಕೊಡುವುದು. ಆದರೆ ಸಿಎಂ ಸಿದ್ದರಾಮಯ್ಯ 7% ನಲ್ಲಿ ಸಾಲ ಕೊಡ್ತಿವೆ ಅಂತ ಸುಳ್ಳು ಹೇಳಿದ್ದಾರೆ. ಪ್ರಶ್ನೆ ಕೇಳಿದರೆ ಪತ್ರಕರ್ತರಿಗೆ ಸಿಎಂ ಬೆದರಿಸುತ್ತಾರೆ. ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.
ಇವರು ಸುಳ್ಳುಗಾರ ಸಿದ್ದರಾಮಯ್ಯ, ಸುಳ್ಳು ಹೇಳುವುದರಲ್ಲಿ ಇವರಿಗೆ ನೊಬೆಲ್ ಸಿಗಬೇಕು. ಇಂತಹ ಸುಳ್ಳು ಹೇಳುವ ಸಿಎಂಅನ್ನು ರಾಜ್ಯ ಇದುವರೆಗೂ ಕಂಡಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮತ್ತಷ್ಟು ಕೋವಿಡ್ ಕೇಸ್ ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರಿಗೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ. ಮುಡಾ ಪ್ರಕರಣದಲ್ಲಿ ರಾಜ್ಯಪಾಲರೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ರೂ ನೈತಿಕವಾಗಿ ಅವತ್ತೇ ಸಿಎಂ ರಾಜೀನಾಮೆ ಕೊಡಬೇಕಿತ್ತು. ರಾಜ್ಯಪಾಲರಿಗೆ, ಸಂವಿಧಾನ ಹುದ್ದೆಗೆ ಕಾಂಗ್ರೆಸ್ ಅಪಮಾನ ಮಾಡ್ತಿದೆ. ರಾಹುಲ್ ಗಾಂಧಿ ತಲೇನೂ ಖಾಲಿ, ಅವರು ಹಿಡಿದ ಸಂವಿಧಾನದ ಪುಸ್ತಕವೂ ಖಾಲಿ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ಬಾಣಂತಿಯರ ಮರಣ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ ಸಿದ್ದರಾಮಯ್ಯ