ಹುಬ್ಬಳ್ಳಿ: ಇಲ್ಲಿನ ಉಪಕಾರಾಗೃಹದಲ್ಲಿ ಕ್ಷುಲ್ಲಕ ವಿಚಾರಕ್ಕೆ ವಿಚಾರಣಾಧೀನ ಕೈದಿಗಳ ಗುಂಪು, ಇತರ ಇಬ್ಬರು ವಿಚಾರಣಾಧೀನ ಕೈದಿಗಳಿಗೆ ಹಾಗೂ ಕಾರಾಗೃಹ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ವಿಚಾರಣಾಧೀನ ಕೈದಿಗಳಾದ ವಿನಾಯಕ ಭಂಡಾರಿ ಹಾಗೂ ಅಭಿಷೇಕ ಭಂಡಾರಿ ಸಹೋದರರನ್ನು ಭೇಟಿಯಾಗಲಿ ಎಂದು ಕೈದಿಗಳ ಕುಟುಂಬದ ಸದಸ್ಯರು ಸಂದರ್ಶನ ಕೊಠಡಿಯಲ್ಲಿ ತಮ್ಮವರೊಂದಿಗೆ ಪ್ರತ್ಯೇಕವಾಗಿ ಮಾತನಾಡುತ್ತಿದ್ದರು. ಈ ವೇಳೆ, ವಿನಾಯಕ ಭಂಡಾರಿ ಹಾಗೂ ಅಭಿಷೇಕ ಭಂಡಾರಿ ಸಹೋದರಿಯ ಕಾಲನ್ನು ಇನ್ನೊಬ್ಬ ಕೈದಿಯ ಸಂದರ್ಶಕರೊಬ್ಬರು ತುಳಿದಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ವಾಗ್ವಾದ ನಡೆದು, ಕೈದಿಗಳಾದ ವಿನಾಯಕ ಭಂಡಾರಿ ಹಾಗೂ ಅಭಿಷೇಕ ಭಂಡಾರಿ ಮೇಲೆ ವಿಚಾರಣಾಧೀನ ಕೈದಿಗಳಾದ ಬಾಬು ಬಳ್ಳಾರಿ, ಪ್ರಜ್ವಲ್ ನೆಟ್ಟೂರು, ದತ್ತಾತ್ರೇಯ ಮತ್ತಿಕಟ್ಟಿ ಎಂಬವರು ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಅಲ್ಲಿಯೇ ಕರ್ತವ್ಯದಲ್ಲಿದ್ದ ಜೈಲರ್, ಹಾಗೂ ಸಿಬ್ಬಂದಿ ಜಗಳ ಬಿಡಿಸಿ ಒಳಗಡೆ ಕರೆದೊಯ್ದಿದ್ದಾರೆ.
ದೂರು ದಾಖಲು: ಆಗ ಕೈದಿ ಪ್ರಜ್ವಲ್ ಅಲ್ಲಿಯ ಬಿದ್ದದ್ದ ಕಲ್ಲಿನಿಂದ ಭಂಡಾರಿ ಸಹೋದರರಿಗೆ ಹೊಡೆದು ಗಾಯಗೊಳಿಸಿದ್ದಾನೆ. ಬಳಿಕ ಇವರನ್ನು ಕ್ವಾರಂಟೈನ್ ವಿಭಾಗಕ್ಕೆ ಕಳುಹಿಸಲಾಗಿದೆ. ಅಲ್ಲಿಯೂ ಬಾಬು, ಪ್ರಜ್ವಲ್, ದತ್ತಾತ್ರೇಯ, ಡೇವಿಡ್, ಕುಮಾರ ಯಾಮರ್ತಿ ಎಂಬ ಕೈದಿಗಳು ಸೇರಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಕೆಲಸಕ್ಕೆ ಅಡ್ಡಿ ಪಡಿಸಿ, ಮಹಿಳಾ ಮತ್ತು ಪುರುಷ ಸಿಬ್ಬಂದಿಯನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಅಲ್ಲದೇ, ಜೀವ ಬೆದರಿಕೆ ಹಾಕಿದ್ದಾರೆ ಎಂಬ ದೂರು ಕೇಳಿ ಬಂದಿದೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಪಕಾರಾಗೃಹದ ಅಧೀಕ್ಷಕಿ ನಾಗರತ್ನಂ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸ್ ಕಮೀಷನರ್ ಪ್ರತಿಕ್ರಿಯೆ: ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ''ಉಪಕಾರಾಗೃಹದಲ್ಲಿ ಗಲಾಟೆ ಕುರಿತಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಸಂಬಂಧ ಹಲ್ಲೆ ಮಾಡಿದ ಬಾಬು ಬಳ್ಳಾರಿ, ಪ್ರಜ್ವಲ್ ನೆಟ್ಟೂರು, ದತ್ತಾತ್ರೇಯ ಮತ್ತಿಕಟ್ಟಿ, ಕುಮಾರ ಯಾಮರ್ತಿ ಎಂಬುವರ ವಿರುದ್ಧ ಕೇಸ್ ದಾಖಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಕೈಗೊಳ್ಳಲಾಗುತ್ತಿದೆ'' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ನಿಲ್ಲದ ಭ್ರೂಣ ಪತ್ತೆ, ಹತ್ಯೆ: ಹೆಲ್ತ್ ಕ್ವಾಟರ್ಸ್‌ನಲ್ಲೇ ದುಷ್ಕೃತ್ಯ ಬೆಳಕಿಗೆ! - Female Feticide Racket