ಕಾರವಾರ: ಕರಾವಳಿ ನಗರಿ ಕಾರವಾರ ತನ್ನ ವಿಶಾಲವಾದ ಕಡಲ ತೀರದಿಂದ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಲ್ಲಿನ ಹಲವು ಆಕರ್ಷಕ ತಾಣಗಳು ಪ್ರವಾಸಿಗರನ್ನು ರಂಜಿಸುತ್ತಿವೆ. ಈ ನಿಟ್ಟಿನಲ್ಲಿ ಮ್ಯೂಸಿಯಂ ಮಾಡಲು ಯುದ್ಧ ವಿಮಾನವೊಂದನ್ನು ಇಲ್ಲಿಗೆ ತರಲಾಗಿತ್ತು. ಈ ಯುದ್ಧ ವಿಮಾನದ ಉದ್ಘಾಟನೆ ಮಾಡದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ಭಾನುವಾರ ಯುದ್ಧ ವಿಮಾನವನ್ನು ಉದ್ಘಾಟಿಸಿದ್ದು, ಪ್ರವಾಸಿಗರ ವೀಕ್ಷಣೆಗೆ ಮಾತ್ರ ಲಭ್ಯವಿಲ್ಲ!.
ಕರಾವಳಿಯ ಹೆಬ್ಬಾಗಿಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂದಾಕ್ಷಣ ಒಂದೆಡೆ ಇಲ್ಲಿನ ಟ್ಯಾಗೋರ್ ಕಡಲ ತೀರ ನೆನಪಾದರೆ, ಮತ್ತೊಂದೆಡೆ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದಾದ ಕದಂಬ ನೌಕಾನೆಲೆ ನೆನಪಾಗುತ್ತದೆ. ತಾಲೂಕಿನ ಅರಗಾ ಗ್ರಾಮದ ಬಳಿ ಇರುವ ಕದಂಬ ನೌಕಾನೆಲೆ ಏಷ್ಯಾದಲ್ಲೇ ದೊಡ್ಡ ನೌಕಾನೆಲೆಯಾಗಿದ್ದು, ಇದು ರಾಜ್ಯದ ಹೆಮ್ಮೆ.
ಕದಂಬ ನೌಕಾನೆಲೆಯ ಬಗ್ಗೆ ಮಾಹಿತಿ ಒದಗಿಸುವ ಜೊತೆಗೆ ಕಾರವಾರಕ್ಕೆ ಆಗಮಿಸುವ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಚಾಪೆಲ್ ಯುದ್ಧನೌಕೆಯನ್ನು ರವೀಂದ್ರನಾಥ ಟ್ಯಾಗೋರ್ ತೀರದಲ್ಲಿ ಇಡಲಾಗಿದೆ. ಅದರ ಜೊತೆಗೆ 2019ರ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದಿದ ಟುಪೋಲೆವ್ 142M ಯುದ್ಧ ವಿಮಾನವನ್ನು ಟ್ಯಾಗೋರ್ ಕಡಲತೀರಕ್ಕೆ ತರಲಾಗಿತ್ತು. 2023ರಲ್ಲಿಯೇ ವಿಶಾಖಪಟ್ಟಣದಿಂದ ತಂದಿದ್ದ ಯುದ್ಧ ವಿಮಾನವನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ.
ಭಾನುವಾರ ಕಾರವಾರ ಶಾಸಕ ಸತೀಶ್ ಸೈಲ್ ಅವರು ಈ ಯುದ್ಧ ವಿಮಾನವನ್ನು ಉದ್ಘಾಟನೆ ಮಾಡಿದರು. ಆದರೆ ಪ್ರವಾಸಿಗರ ವೀಕ್ಷಣೆಗೆ ವ್ಯವಸ್ಥೆ ಮಾಡದೇ, ನೆಪಮಾತ್ರಕ್ಕೆ ಉದ್ಘಾಟನೆ ಮಾಡಿದ್ದಾರೆ. ಯುದ್ಧ ನೌಕೆಯಲ್ಲಿ ಲೈಟ್ಸ್, ಎಸಿ ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಕಾಟಾಚಾರಕ್ಕೆ ಉದ್ಘಾಟನೆ ಮಾಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಬಂದ್ ಮಾಡಲಾಗಿದೆ. 2 ಕೋಟಿ ರೂ. ಅನುದಾನ ಬಂದರೂ ಪ್ರವಾಸಿಸ್ನೇಹಿಯಾಗಿ ಮಾಡಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಇದಷ್ಟೇ ಅಲ್ಲ, ಕಾಮಗಾರಿ ಕೆಲಸವೂ ಕುಂಟುತ್ತಾ ಸಾಗಿತ್ತು. ಈ ವರ್ಷ ಹೊಸ ವರ್ಷಾಚರಣೆ ವೇಳೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಜಿಲ್ಲಾಡಳಿತ ಹೇಳಿತ್ತು. ಆದರೆ ಯಾವುದೇ ಕಾಮಗಾರಿ ಸರಿಯಾಗಿ ಮಾಡಿರಲಿಲ್ಲ.
ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುವುದೇನು?: "ಯುದ್ಧ ವಿಮಾನ ಮ್ಯೂಸಿಯಂ ಕಾಮಗಾರಿಗೆ ಸುಮಾರು 2 ಕೋಟಿ ರೂ.ಮಂಜೂರಾಗಿದ್ದು, ಇಲ್ಲಿವರೆಗೆ 20 ಲಕ್ಷ ರೂ ಖರ್ಚಾಗಿದೆ. ಉಳಿದ ಹಣದಲ್ಲಿ ಇನ್ನೂ ಸಾಕಷ್ಟು ಕಾಮಗಾರಿ ಮಾಡಹೇಕಿದೆ. ಅವುಗಳನ್ನು ಮಾಡಿದ ನಂತರವೇ ಉದ್ಘಾಟನೆ ಮಾಡಲಾಗುತ್ತದೆ. ಆದರೆ ಈಗ ಎಸಿ, ಲೈಟ್ಸ್ ಅಳವಡಿಸಿದ ಬಳಿಕ ಕೆಲವೇ ದಿನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗುವುದು" ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯುದ್ಧ ನೌಕೆಗೆ ಕೊನೆಗೂ ದುರಸ್ತಿ ಭಾಗ್ಯ: ಮತ್ತಷ್ಟು ಆಕರ್ಷಣೆಗೆ ಸಜ್ಜಾದ ಐಎನ್ಎಸ್ ಚಾಪೆಲ್ ಮ್ಯೂಸಿಯಂ