ದಾವಣಗೆರೆ: ತುಂಗಾ ಮೇಲ್ದಂಡೆ ನಾಲೆ ಒಡೆದು ರೈತರ ಸಾವಿರಾರು ಎಕರೆ ಜಮೀನು ಜಲಾವೃತ ಆಗಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿ ಬಳಿ ಭಾನುವಾರ ಸಂಜೆ ನಡೆದಿದೆ. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
25 ವರ್ಷಗಳ ಹಿಂದೆ ಹಾವೇರಿ ಮತ್ತು ದಾವಣಗೆರೆ ಭಾಗದ ನೀರಾವರಿಗಾಗಿ ನಿರ್ಮಾಣ ಆಗಿರುವ ನಾಲೆ ಒಡೆದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಅವರು ಸ್ಥಳೀಯರಿಂದ ಮಾಹಿತಿ ಪಡೆದರು. ನಾಲೆ ಒಡೆದ ಪರಿಣಾಮ ಅಪಾರ ಪ್ರಮಾಣದ ಅಡಿಕೆ, ಮೆಕ್ಕೆಜೋಳ, ಹತ್ತಿ, ಭತ್ತ ಸೇರಿದಂತೆ ವಿವಿಧ ಬೆಳೆಗಳು ಜಲಾವೃತ ಆಗಿದ್ದು, ರೈತರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ನಾಲೆ ಒಡೆದ ಪರಿಣಾಮ ರಸ್ತೆ ಮತ್ತು ಮೂರು ಸಂಪರ್ಕ ಸೇತುವೆಗಳು ಕೊಚ್ಚಿ ಹೋಗಿರುವ ಪರಿಣಾಮ ಈ ಅನಾಹುತ ಸಂಭವಿಸಿದೆ. ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲಿನ ರೈತರಿಗೆ ಜಾಗೃತಿ ಮೂಡಿಸಿ ಘಟನಾ ಸ್ಥಳದಿಂದ ದೂರ ಕಳುಹಿಸಲಾಗಿದೆ. ನೀರು ಹರಿಯುವುದನ್ನು ನಿಲ್ಲಿಸಲು ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ.
ರೇಣುಕಾಚಾರ್ಯ ಭೇಟಿ ನೀಡಿ ಮುಂಗಾರು ಬೆಳೆಗೆ ಸಮಸ್ಯೆ ಆಗದಂತೆ ನೀರು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ರೈತರಿಗೆ ಧೈರ್ಯ ತುಂಬಿದರು. ನೀರು ನಿಂತ ನಂತರ ಆಧುನಿಕ ತಂತ್ರಜ್ಞಾನ ಬಳಸಿ ದುರಸ್ತಿ ಕಾರ್ಯ ಮಾಡುವ ಭರವಸೆಯನ್ನು ರೈತರಿಗೆ ನೀಡಿದ್ದಾರೆ. ನಾಲೆಯನ್ನು ವಾರದೊಳಗೆ ನಿರ್ಮಿಸಿ ರೈತರ ಬೆಳೆಗೆ ನೀರು ನೀಡುವುದಾಗಿ ತಿಳಿಸಿದ್ದಾರೆ. ಬೆಳೆ ನಷ್ಟದ ಪರಿಶೀಲನೆ ಮಾಡಿ ಬೆಳೆ ಹಾನಿ ವರದಿ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಬೆಳೆ ಹಾನಿ ವರದಿ ಬಂದ ನಂತರ ರೈತರಿಗೆ ಆಗಿರುವ ಬೆಳೆ ಹಾನಿ ನಷ್ಟ ಭರಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಬೆಟ್ಟದಿಂದ ಜಾರಿದ ಬಂಡೆ : ಪೈಪ್ಲೈನ್ಗೆ ಹಾನಿ, ನೀರಿನ ಸಮಸ್ಯೆ ಹೆಚ್ಚಳ - Pipeline Damaged