ಶಿವಮೊಗ್ಗ: ನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಿಸಿಎಫ್) ಕಚೇರಿ ಆವರಣದಲ್ಲಿರುವ ಬೃಹತ್ ಮರಗಳನ್ನು ಕಡಿದಿರುವ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಿಸಿಎಫ್‌ಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಕಳೆದ ಒಂದು ವಾರದ ಹಿಂದೆ ಸಿಸಿಎಫ್ ಕಚೇರಿ ಆವರಣದಲ್ಲಿ ಸುಮಾರು 50 ವರ್ಷಗಳಷ್ಟು ಹಳೆಯ ಕಾಡು ಜಾತಿಯ ಮೂರು ಮರಗಳನ್ನು ಕಡಿದು ಸಾಗಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮೂರು ದಿನದೊಳಗೆ ಮಾಹಿತಿ ನೀಡಿ ಎಂದು ಅರಣ್ಯ ಸಚಿವರು ಸಿಸಿಎಫ್ ಹನುಮಂತಪ್ಪ ಅವರಿಗೆ ನೋಟಿಸ್ ಕೊಟ್ಟಿದ್ದಾರೆ.
ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿಯೇ ಮರಗಳನ್ನು ಕಡಿದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ಥಳೀಯರಾದ ಲೋಕೇಶ್ ಮಾತನಾಡಿ, "ಮೊದಲು ವಿದ್ಯುತ್ ತಂತಿಗೆ ಅಡ್ಡ ಬರುತ್ತಿವೆ ಎಂದು ಮರಗಳನ್ನು ಕಡಿಯುತ್ತಿದ್ದಾರೆ ಅಂದುಕೊಂಡಿದ್ದೆವು. ಆದರೆ ಇವರು ಮರಗಳನ್ನು ಬುಡಸಮೇತ ಕಡಿದಿರುವುದನ್ನು ಕಂಡು ನಮಗೆ ಆಘಾತವಾಯಿತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ವಿಚಾರಿಸಲು ಹೋದಾಗ ಅವರು ರಜೆಯಲ್ಲಿದ್ದಾರೆ ಎಂದು ಸಮರ್ಪಕ ಉತ್ತರ ನೀಡಲಿಲ್ಲ. ಅರಣ್ಯಾಧಿಕಾರಿಗಳು ಮರಗಳ ರಕ್ಷಕರೋ ಅಥವಾ ಭಕ್ಷಕರೋ" ಎಂದು ಪ್ರಶ್ನಿಸಿದರು.
ಈ ಕುರಿತು ಪ್ರಶ್ನಿಸಲು ಪ್ರಯತ್ನಿಸಿದ್ದು, ಸಿಸಿಎಫ್ ಕಚೇರಿಯಲ್ಲಿ ಸಿಸಿಎಫ್ ಹನುಮಪ್ಪ ಇರಲಿಲ್ಲ. ಇದರಿಂದಾಗಿ ಮ್ಯಾನೇಜರ್ ನಾಗೇಶ್ ಎಂಬವರು ಪ್ರತಿಕ್ರಿಯಿಸಿ, "ಸಚಿವ ಈಶ್ವರ್ ಖಂಡ್ರೆ ಅವರಿಂದ ನೋಟಿಸ್ ಬಂದಿರುವುದು ಉಂಬ್ಳೆಬೈಲು ಅರಣ್ಯ ವಲಯಕ್ಕೆ. ಮರಗಳ ಕಡಿತ ಕುರಿತು ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಅವರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಸಿಸಿಎಫ್ ಅವರು ಕ್ರಮ ತೆಗೆದುಕೊಳ್ಳುತ್ತಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಇಂದು ವಿಶ್ವ ಘೇಂಡಾಮೃಗ ದಿನ: ಒಂದು ಇಮೇಲ್ನಿಂದ ಶುರುವಾಗಿತ್ತು ಈ ವಿಶೇಷ ದಿನಾಚರಣೆ! - World Rhino Day