ಶಿವಮೊಗ್ಗ: ಕೇಂದ್ರದ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶಿವಮೊಗ್ಗಕ್ಕೆ ಫೆಬ್ರವರಿ 22ರಂದು ಆಗಮಿಸಲಿದ್ದು, ಅಂದು ರಾಷ್ಟ್ರೀಯ ಹೆದ್ದಾರಿ ದಕ್ಷಿಣ ವಲಯದ 18 ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ನೆಹರು ಕ್ರೀಡಾಂಗಣದ ಆವರಣದಲ್ಲಿ ಗುರುವಾರ ಮಧ್ಯಾಹ್ನ 2.30 ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಅಂದು ನಿತಿನ್ ಗಡ್ಕರಿ ಅವರು ಬೆಳಗ್ಗೆ ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮ ಮುಗಿಸಿಕೊಂಡು, ಮಧ್ಯಾಹ್ನ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದೇಶಾದ್ಯಂತ ಸಾಕಷ್ಟು ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿಗೆ ಆದ್ಯತೆ ನೀಡಲಾಗುತ್ತಿದೆ. ಅಂದು ಕೇಂದ್ರ ಸಾರಿಗೆ ಸಚಿವ ಗಡ್ಕರಿ ಅವರು ಮುಗಿದ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ವಾತಂತ್ರ್ಯ ನಂತರ ರಾಷ್ಟ್ರದಲ್ಲಿ 2014 ರ ತನಕ ಒಟ್ಟು 91,277 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಆಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014 ರಿಂದ 2024 ರ ತನಕ 1, 46,145 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು. 54,858 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಹಿಂದೆ ದಿನಕ್ಕೆ 12 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿತ್ತು. ಈಗ ಪ್ರತಿ ದಿನ 37 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿವಿಧ ರಸ್ತೆ ಮೇಲ್ದರ್ಜೆಗೆ ಪ್ರಸ್ತಾವನೆ: ಮೇಲ್ದರ್ಜೆಗೆ ಶಿವಮೊಗ್ಗ ಹೊನ್ನಾಳಿ, ಹರಿಹರದ ಮೂಲಕ ಮರಿಯಮ್ಮನಹಳ್ಳಿ ರಸ್ತೆಗೆ ಸೇರ್ಪಡೆ ಆಗಲಿದೆ. ಇನ್ನು ಶಿವಮೊಗ್ಗದಿಂದ ಶಿಕಾರಿಪುರ ಬಂಕಾಪುರದ ರಸ್ತೆ ಹಾಗೂ ಕರಾವಳಿ ಭಾಗಕ್ಕೂ ಸೇರ್ಪಡೆ ಅಗುವ ರಸ್ತೆಯ ಅಭಿವೃದ್ಧಿಗೆ ಮನವಿ ಮಾಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 139.41 ಕೋಟಿ ರೂ. ವೆಚ್ಚದ 4 ಕಾಮಗಾರಿಗಳು ಪೂರ್ಣಗೊಂಡಿವೆ. ಅಲ್ಲದೆ ಒಟ್ಟು 2138.30 ಕೋಟಿ ವೆಚ್ಚದ 6 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಬಿಎಂಟಿಸಿ ನೌಕರರಿಗೂ ಕೆಎಸ್‌ಆರ್‌ಟಿಸಿ ನೌಕರರ ಮಾದರಿಯಲ್ಲೇ 1 ಕೋಟಿ ರೂ. ಅಪಘಾತ ವಿಮೆ