ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ. ಉಕ್ಕಿ ಹರಿಯುತ್ತಿರುವ ನದಿಯಿಂದಾಗಿ ಯಡೂರು ಶ್ರೀ ವೀರಭದ್ರ ದೇವಾಲಯ ಕಳೆದ ರಾತ್ರಿ ಜಲಾವೃತಗೊಂಡಿತು. ಅರ್ಚಕರು ಮಹಾಮಂಗಳಾರತಿ ನೆರವೇರಿಸಿ ಶಿವಸ್ತೋತ್ರ ಪಾರಾಯಣ ಮಾಡುತ್ತಿದ್ದರು. ಈ ವೇಳೆ ದೇಗುಲವನ್ನು ನೀರು ಆವರಿಸಿಕೊಂಡಿತು. ಭಕ್ತರು ದೂರದಿಂದಲೇ ದೇವರಿಗೆ ನಮಿಸಿದರು.
ಚಿಕ್ಕೋಡಿ ಪೊಲೀಸರು ದೇವಸ್ಥಾನದ ಆವರಣದೆದುರು ಬ್ಯಾರಿಕೇಡ್ ಅಳವಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. 2019 ಹಾಗೂ 2021ರಲ್ಲೂ ದೇಗುಲ ಸಂಪೂರ್ಣವಾಗಿ ಮುಳುಗಡೆಯಾಗಿತ್ತು.
ಕೃಷ್ಣಾ ನದಿಯಲ್ಲಿ ಸದ್ಯ ಎರಡು ಲಕ್ಷದ ಅರವತ್ತು ಸಾವಿರ ಕ್ಯೂಸೆಕ್ ಒಳಹರಿವಿದ್ದು, ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಚಿಕ್ಕೋಡಿ, ಬಾಗಲಕೋಟೆ, ರಾಯಚೂರು ಭಾಗದ ಜನರು ಮತ್ತೆ ಪ್ರವಾಹ ಆತಂಕ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ದೆಹಲಿ: IAS ಕೋಚಿಂಗ್ ಕೇಂದ್ರದ ನೆಲಮಾಳಿಗೆಗೆ ನುಗ್ಗಿದ ನೀರು; ಮೂವರು ವಿದ್ಯಾರ್ಥಿಗಳು ಸಾವು - Coaching Centre Flooded