ಚಾಮರಾಜನಗರ: ಒಂದು ಕಡೆ ಕಣ್ಣೆದುರೇ ಜಿಂಕೆ ಮೇಲೆ ಹುಲಿ ದಾಳಿ, ಮತ್ತೊಂದು ಕಡೆ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕ ಉಂಟಾಗಿದೆ. ಇದರಿಂದ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಪಡಗೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಜಿಂಕೆಯನ್ನ ಅಟ್ಟಿಸಿಕೊಂಡು ಹೋದ ಹುಲಿ ಕಂಡ ಗ್ರಾಮದ ಜನತೆ ಭಯಭೀತರಾಗಿದ್ದಾರೆ. ಗುರುವಾರ ಬೆಳಗ್ಗೆ ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಜಮೀನಿನಲ್ಲಿ ಹಠಾತ್ ಜಿಂಕೆ ಮೇಲೆ ಎರಗಿದ ಹುಲಿಯನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಹುಲಿ ಕಂಡು ಸ್ಥಳೀಯರು ಕೂಗಿಕೊಂಡಾಗ ಜಿಂಕೆಯನ್ನ ಅಲ್ಲೇ ಬಿಟ್ಟು ಹುಲಿ ಪರಾರಿಯಾಗಿದೆ. ಹುಲಿ ದಾಳಿಗೆ ಸಿಲುಕಿ ಕೆಲಕಾಲ ನರಳಾಡಿದ ಜಿಂಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಹುಲಿ ದಾಳಿಗೆ ಸಿಲುಕಿದ್ದನ್ನ ಕಣ್ಣಾರೆ ಕಂಡ ಸ್ಥಳೀಯರು ಜಿಂಕೆಯ ದೃಶ್ಯವನ್ನ ಸೆರೆಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅಮ್ಮನಿಗಾಗಿ ಹಾತೊರೆಯುತ್ತಿದೆ ಚಿರತೆ ಮರಿ: ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಶಿವಕುಮಾರ್ ಎಂಬವರ ಕಬ್ಬಿನ ಗದ್ದೆಯಲ್ಲಿ ತನ್ನ ಮರಿ ಬಿಟ್ಟು ಚಿರತೆ ಓಡಿ ಹೋಗಿದ್ದು ಚಿರತೆ ಸೆರೆ ಕಾರ್ಯಾಚರಣೆ ಮುಂದುವರೆದಿದೆ. ಗುರುವಾರದಂದು ಮರಿ ಚಿರತೆಯು ತಾಯಿಗಾಗಿ ಹಾತೊರೆಯುತ್ತಿದ್ದ ದೃಶ್ಯ ಕಂಡುಬಂದಿತು. ಬೇಟೆ ಹುಡುಕಿಕೊಂಡು ತಾಯಿ ಚಿರತೆ ತೆರಳಿರುವ ಸಾಧ್ಯತೆ ಇದ್ದು, ಮರಿಗಾಗಿ ವಾಪಸ್ ಬರಲಿದೆ ಎಂಬ ಖಚಿತತೆಯೊಂದಿಗೆ ಅರಣ್ಯ ಇಲಾಖೆ ಬೋನಿರಿಸಿದೆ. ಇನ್ನು, ಚಿರತೆ ಮರಿ ಪತ್ತೆಯಾಗಿರುವುದರಿಂದ ಜಮೀನುಗಳಿಗೆ ರೈತರು ತೆರಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಬಂಡೀಪುರದಲ್ಲಿ ಕ್ಯಾಮರಾಗೆ ಸೆರೆಯಾದ ಟೈಗರ್ ಫ್ಯಾಮಿಲಿ: ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಕ್ಯಾಮರಾಗೆ ಹುಲಿ ಕುಟುಂಬ ರಿಲ್ಯಾಕ್ಸ್ ಮೂಡಿಗೆ ಜಾರಿರುವ ದೃಶ್ಯ ಸೆರೆಯಾಗಿದೆ. ಬಂಡೀಪುರದ ಸಫಾರಿ ಜೋನಿನ ಬಾರ್ಡರ್ ರೋಡ್ ಎಂಬಲ್ಲಿ ತೊರೆ ಸಮೀಪ ಹುಲಿ ಕುಟುಂಬ ನಿದ್ರೆಗೆ ಜಾರಿದ ವಿಡಿಯೋವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ತಾಯಿ ಹುಲಿ ಹಾಗೂ ಎರಡು ಮರಿ ಹುಲಿಗಳು ಮಲಗಿ ನಿದ್ರಿಸುತ್ತಿದ್ದರೇ ಗಂಡು ಹುಲಿ ಎಚ್ಚರವಾಗಿ ಅತ್ತಿತ್ತ ನೋಡುವುದು ಸೆರೆಯಾಗಿದೆ.
ಇದನ್ನೂ ಓದಿ: ಚಾಮರಾಜನಗರ: ಜಲಮೂಲ ಬಳಿ ಬರುವ ಆನೆಗಳ ಲೆಕ್ಕ ಪೂರ್ಣ, ಮೂರು ದಿನದ ಗಜ ಗಣತಿ ಅಂತ್ಯ - elephants census