ರಾಮನಗರ: ಮಾಗಡಿಯ ಬಹುದೊಡ್ಡ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಧಿಕ್, ಹಂಜಾ ಮತ್ತು ಖಾಲೀದ್ ಬಂಧಿತರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾತನಾಡಿ, "ಮಾಗಡಿ ಪಟ್ಟಣದ ಮನೆಯೊಂದರಲ್ಲಿ ಸೆ.23ರಂದು 5 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‌ಪಿ ಮತ್ತು ಮಾಗಡಿ ಠಾಣೆ ಸಿಪಿಐ ಗಿರಿರಾಜ್ ನೇತೃತ್ವದ ತಂಡ ಕೃತ್ಯದಲ್ಲಿ ನಾಲ್ವರು ಭಾಗಿಯಾಗಿರುವುದನ್ನು ಪತ್ತೆ ಹಚ್ಚಿ, ಮೂವರನ್ನು ಬಂಧಿಸಿದೆ. ಮತ್ತೊಬ್ಬ ಪರಾರಿಯಾಗಿದ್ದಾನೆ" ಎಂದು ತಿಳಿಸಿದರು.
"ಬಂಧಿತರಿಂದ 3 ಕೋಟಿ 60 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದೇವೆ. ಮತ್ತೊಬ್ಬನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ. ಆರೋಪಿಗಳು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ 27 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಕಲಿ ಪಾಸ್ಪೋರ್ಟ್ ಬಳಸಿ ಮುಂಬೈನಿಂದ ಬೆಹ್ರೆನ್ಗೆ ತೆರಳಲು ಮುಂದಾಗಿದ್ದರು. ಈ ಕುರಿತು ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರ ಸಹಕಾರದಿಂದ ಮುಂಬೈ ಏರ್ಪೋರ್ಟ್ನಲ್ಲಿ ಬಂಧಿಸಿದ್ದೇವೆ. ಖಾಲೀದ್ ನಮ್ಮ ವಶದಲ್ಲಿದ್ದು, ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದು ಎಸ್ಪಿ ಮಾಹಿತಿ ನೀಡಿದರು.
ಇದನ್ನೂ ಓದಿ: ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ಲಕ್ಷಾಂತರ ರೂ. ನಷ್ಟ ಆರೋಪ: ನಿವೃತ್ತ ಅಧಿಕಾರಿ ಸಹಿತ ಇಬ್ಬರ ವಿರುದ್ಧ ಎಫ್ಐಆರ್