ಬೆಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ತನ್ನ ರುದ್ರ ಪ್ರತಾಪ ಮುಂದುವರೆಸಿದ್ದು, ಈ ಹಿನ್ನೆಲೆ ಅಲ್ಲಿನ ಮೂರೂ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮುಂದಿನ 48 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ ಹಾಗೂ ಅಲ್ಲಿನ ಭಾಗಗಳಿಗೆ ಜೂನ್ 7 ರಿಂದ 9 ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರಿಗೆ ಮತ್ತು ಶಿವಮೊಗ್ಗಕ್ಕೆ ಎರಡು ದಿನ ಆರೆಂಜ್ ಅಲರ್ಟ್ ಕೊಡಲಾಗಿದೆ. ಜೂನ್ 7 ರಿಂದ 9 ರವರೆಗೆ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚದುರಿದಂತೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿಯ ವೇಗವು 30 ರಿಂದ 40 ಕಿಲೋಮೀಟರ್ ಪ್ರತಿ ಘಂಟೆಗೆ ಇರಲಿದ್ದು, ಅಲ್ಲಿಯೂ ಭಾರಿ ಮಳೆ ಸಂಭವಿಸುವ ಸಾಧ್ಯತೆಯಿದೆ ಎಂದಿದೆ.
ದಕ್ಷಿಣ ಕರ್ನಾಟಕದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ನಿರಂತರ ಗಾಳಿ ಇರಲಿದ್ದು, ಸಾಧಾರಣ ಮಳೆ ಆಗಲಿದೆ. ಹಗುರದಿಂದ ಸಾಧಾರಣ ಮಳೆ ಉತ್ತರ ಒಳ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಸುರಿಯಲಿದೆ ಎಂದು ಮಾಹಿತಿ ನೀಡಿದೆ.
ಸಿಲಿಕಾನ್ ಸಿಟಿಯನ್ನು ಆವರಿಸಲಿರುವ ಮೋಡಗಳು: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 30 ರಿಂದ 40 ಕಿಲೋಮೀಟರ್ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಡಿಗ್ರಿ ಮತ್ತು 21 ಡಿಗ್ರಿ ಆಗಿರಲಿದೆ ಎಂದು ಹೇಳಿದೆ.
''ನೈಋತ್ಯ ಮಾನ್ಸೂನ್ ಕರಾವಳಿಯಲ್ಲಿ ಸಾಧಾರಣವಾಗಿದ್ದು, ಒಳನಾಡಿನಲ್ಲಿ ದುರ್ಬಲವಾಗಿದೆ. ಇಂದು ಕರಾವಳಿಯ ಹೆಚ್ಚಿನ ಸ್ಥಳಗಳಲ್ಲಿ ಮಳೆಯಾಗಿದೆ. ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಸಾಮಾನ್ಯವಾಗಿದೆ'' ಎಂದು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎನ್ ಪುವಿಯರಸನ್ ಹೇಳಿದ್ದಾರೆ.
ಎಲ್ಲಿ ಅತಿ ಹೆಚ್ಚು ಮಳೆ : ನಿನ್ನೆಯಿಂದ ಅತಿ ಹೆಚ್ಚು ಮಳೆ ಮಂಕಿಯಲ್ಲಿ (ಉತ್ತರ ಕನ್ನಡ ಜಿಲ್ಲೆ) 15 ಸೆಂಟಿಮೀಟರ್ ಬಿದ್ದಿದೆ. ಉಳಿದಂತೆ ಅಂಕೋಲಾ (ಉತ್ತರ ಕನ್ನಡ ಜಿಲ್ಲೆ) 11, ಕಾರವಾರ ವೀಕ್ಷಣಾಲಯ (ಉತ್ತರ ಕನ್ನಡ ಜಿಲ್ಲೆ) 11, ಗೋಕರ್ಣ (ಉತ್ತರ ಕನ್ನಡ ಜಿಲ್ಲೆ) 9, ಕಿರಾಲಿ ಪಿಟಿಒ (ಉತ್ತರ ಕನ್ನಡ ಜಿಲ್ಲೆ) 8, ಕುಮಟಾ (ಉತ್ತರ ಕನ್ನಡ ಜಿಲ್ಲೆ) 8, ಕದ್ರಾ (ಉತ್ತರ ಕನ್ನಡ ಜಿಲ್ಲೆ) 7 ಸೆಂಟಿಮೀಟರ್ ಮಳೆಯಾಗಿದೆ.
ಇದನ್ನೂ ಓದಿ : ಮಳೆ: ಉಡುಪಿ ಜಿಲ್ಲೆಯ 3 ತಾಲೂಕಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ - Udupi Rain