ವಿಜಯಪುರ: ಆಗಸ್ಟ್ 8ರಂದು ವಿಜಯಪುರ ನಗರದಲ್ಲಿ ನಡೆದಿದ್ದ ವಕೀಲ ರವಿ ಮೇಲಿನಕೇರಿ ಎಂಬವರ ಮೇಲಿನ ಹಿಟ್ ಆ್ಯಂಡ್ ರನ್ ಅಪಘಾತ ಪ್ರಕರಣ ಹಳೆಯ ವೈಷಮ್ಯದ ಕಾರಣಕ್ಕಾಗಿ ವ್ಯವಸ್ಥಿತವಾಗಿ ಸಂಚು ರೂಪಿಸಿ ನಡೆಸಲಾದ ಕೊಲೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಾಣೆ ದೃಢಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಕೃತ್ಯಕ್ಕೆ ಬಳಸಲಾದ ಇನ್ನೋವಾ ವಾಹನ ಸೇರಿದಂತೆ ಸಂಚಿಗೆ ಬಳಸಲಾದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಪ್ರಕರಣದ ಪೂರ್ಣ ವಿವರ: ಆಗಸ್ಟ್ 8ರಂದು ಸಂಜೆ 5.30ರಿಂದ 6.00ರ ನಡುವೆ ರವಿ ಮೇಲಿನಕೇರಿ ವಿಜಯಪುರ ನಗರದ ನ್ಯಾಯಾಲಯದಿಂದ ತಮ್ಮ ಸ್ಕೂಟಿಯಲ್ಲಿ ಬಾಗಲಕೋಟ ಕ್ರಾಸ್ ಕಡೆಗೆ ಹೋಗುತ್ತಿದ್ದರು. ಪಾಲಿಟೆಕ್ನಿಕ್ ಹಾಸ್ಟೆಲ್ ಹತ್ತಿರ ಬರುತ್ತಿದ್ದಂತೆ ಅಪರಿಚಿತರು ನಂಬರ್‌ಪ್ಲೇಟ್ ಇಲ್ಲದ ಇನೋವಾ ಕಾರಿನಲ್ಲಿ ಬಂದು ರವಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ್ದರು.
ಡಿಕ್ಕಿಯ ರಭಸಕ್ಕೆ ರವಿ ಸಂಚರಿಸುತ್ತಿದ್ದ ವಾಹನದ ಕೆಳಗೆ ಸಿಕ್ಕಿ ಹಾಕಿಕೊಂಡಿದೆ. ಹೀಗಿದ್ದರೂ ನಿಲ್ಲಿಸದೇ ಕಾರಿನಲ್ಲಿ ಸುಮಾರು ದೂರ ಎಳೆದೊಯ್ದಿದ್ದರು. ಶವ ಮನಗೂಳಿ ರಸ್ತೆಯ ಮೇಲಿರುವ ಸ್ಮಶಾನದ ಹತ್ತಿರದ ರಸ್ತೆಯ ಮೇಲೆ ಬಿದ್ದಿತ್ತು. ರಸ್ತೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದರು.
ಇದನ್ನೂ ಓದಿ: ದರ್ಶನ್, ಸಹಚರರಿಗೆ ಜೈಲೇ ಗತಿ: ಆಗಸ್ಟ್ 28ರವರೆಗೆ ಜೈಲುವಾಸ ವಿಸ್ತರಣೆ - Renukaswamy Murder Case