ಬೆಂಗಳೂರು: ಕಾಂಗೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಅದು ದೇಶದ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುತ್ತದೆ ಎಂಬುದಾಗಿ ಪ್ರಧಾನಿ ಮೋದಿ ಪ್ರಚೋದನಾಕಾರಿ ಭಾಷಣ ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಾಖಲಿಸಿದ್ದ ಖಾಸಗಿ ದೂರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಜಾಗೊಳಿಸಿದೆ.
''ಪ್ರಧಾನಿ ಭಾಷಣದಿಂದ ಹಿಂದೂ - ಮುಸ್ಲಿಮರ ನಡುವೆ ಗೊಂದಲಕ್ಕೆ ಕಾರಣವಾಗಲಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು'' ಎಂದು ಕೋರಿ ಬೆಂಗಳೂರಿನ ಹೆಬ್ಬಾಳದ ನಿವಾಸಿ ಜಿಯಾವುರ್ ರಹಮಾನ್ ನೊಮಾನಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಎನ್ ಶಿವಕುಮಾರ್ ಅವರು, ದೂರುದಾರರು ಸಲ್ಲಿಸಿರುವ ಮನವಿಯಂತೆ ಪ್ರಕರಣವನ್ನು ತನಿಖೆಗೆ ವಹಿಸುವುದಕ್ಕೆ ಅರ್ಹವಿಲ್ಲ ಎಂದು ಅಭಿಪ್ರಾಯಪಟ್ಟು ದೂರನ್ನು ವಜಾಗೊಳಿಸಿ ಆದೇಶಿಸಿದ್ದಾರೆ. ಅಲ್ಲದೇ, ಸಿಆರ್‌ಪಿಸಿ ಸೆಕ್ಷನ್ 200ರ ಅಡಿ ಖಾಸಗಿ ದೂರು ದಾಖಲಿಸಿದ್ದು, ಸೆಕ್ಷನ್ 156 (3) ಅಡಿ ಆದೇಶಿಸಲು ಪ್ರಕರಣ ಅರ್ಹವಿಲ್ಲ ಎಂದು ತಿಳಿಸಿ ವಜಾಗೊಳಿಸಿ ಆದೇಶಿಸಲಾಗಿದೆ.
''ಕಳೆದ ಏಪ್ರಿಲ್‌ನಲ್ಲಿ ರಾಜಸ್ಥಾನದಲ್ಲಿ ನಡೆದಿದ್ದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೆಂದ್ರ ಮೋದಿ ಭಾಷಣವು ಮುಸ್ಲಿಮರನ್ನು ನಿಂದಿಸುವಂತಿದೆ. ಈ ದೇಶದ ಸಂಪತ್ತನ್ನು ಲೂಟಿ ಹೊಡೆದ ನುಸುಳುಕೋರರಿಗೆ ಇಲ್ಲಿರುವ ಮುಸ್ಲಿಮರನ್ನು ಹೋಲಿಕೆ ಮಾಡುವಂತೆ ಉಳಿದ ಜನರನ್ನು ಪ್ರೇರೇಪಿಸುವಂತಿದೆ. ಹಾಗಾಗಿ, ಸಮಾಜದಲ್ಲಿ ದ್ವೇಷ ಹರಡಿದ, ಶಾಂತಿ ಭಂಗ ಉಂಟು ಮಾಡಿದ ಆರೋಪದ ಮೇಲೆ ಪ್ರಧಾನಿ ಮೋದಿ ವಿರುದ್ಧ ಕ್ರಮಕೈಗೊಳ್ಳಬೇಕು. ಅವರ ಭಾಷಣದಲ್ಲಿ ಸಮಾಜ ಮತ್ತು ಧರ್ಮಗಳ ನಡುವೆ ದ್ವೇಷ ಬಿತ್ತುವ, ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಕ್ರಿಮಿನಲ್ ಪ್ರಚೋದನೆ ನೀಡುವ ಭಾಷಣ ಮಾಡಿರುವ ಅಂಶಗಳಿವೆ. ಈ ಸಂಬಂಧ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶಿಸಬೇಕು'' ಎಂದು ದೂರುದಾರರು ಕೋರಿದ್ದರು.
''ಪ್ರಧಾನಿ ಮೋದಿ ದ್ವೇಷ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಕಂಡಿದ್ದು, ಇದು ಪ್ರಕರಣದಲ್ಲಿ ಸಾಕ್ಷಿಯಾಗಿರುವ ಆರ್ ಕಲೀಮುಲ್ಲಾ ಅವರ ಗಮನಕ್ಕೂ ಬಂದಿದೆ. ಹೀಗಾಗಿ, ತಕ್ಷಣ ಏಪ್ರಿಲ್ 26ರಂದು ಅಮೃತಹಳ್ಳಿ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಅಮೃತಹಳ್ಳಿ ಪೊಲೀಸರು ಇದು ಭಾರತೀಯ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಡುವುದರಿಂದ ಎಫ್‌ಐಆರ್ ದಾಖಲಿಸಲಾಗದು ಎಂದು ಹಿಂಬರಹ ನೀಡಿದ್ದರು. ಹೀಗಾಗಿ ಖಾಸಗಿ ದೂರು ದಾಖಲಿಸಿರುವುದಾಗಿ'' ಅರ್ಜಿದಾರರು ತಿಳಿಸಿದ್ದರು.
ಇದನ್ನೂ ಓದಿ : ವಾಲ್ಮೀಕಿ ನಿಗಮದ ಹಗರಣ: ಆರೋಪಿ ನಾಗೇಂದ್ರಗೆ ಚಿಕಿತ್ಸೆ ಕೋರಿರುವ ಅರ್ಜಿ ಜುಲೈ 18ಕ್ಕೆ ವಿಚಾರಣೆ - Valmiki Corporation Scam