ಬೆಂಗಳೂರು: ರಾಜಧಾನಿಯಲ್ಲಿ ಇಂದು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಬೈಕ್ಗೆ ಡಿಕ್ಕಿ ಹೊಡೆದು ಬಳಿಕ ಡಿವೈಡರ್ಗೆ ಡಿಕ್ಕಿಯಾಗಿ ಕಾರು ಮೇಲ್ಸೇತುವೆಯಿಂದ ಬಿದ್ದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐವರಲ್ಲಿ ಓರ್ವ ಮೃತಪಟ್ಟಿದ್ದಾನೆ.
ಶಬರೀಷ್ (29) ಮೃತಪಟ್ಟ ದುದೈರ್ವಿ. ಕಾರಿನಲ್ಲಿದ್ದ ಶಂಕರ್ ರಾಮ್, ಮಿಥುನ್ ಚಕ್ರವರ್ತಿ, ಅನುಶ್ರೀ ಹಾಗೂ ಬೈಕ್ ಚಾಲಕ ಮಂಜುನಾಥ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕರ್ ಹಾಗೂ ಮಿಥುನ್ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದು, ಉಳಿದಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಮೂಲದ ಶಬರೀಷ್ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ. ವೀಸಾ ಪಡೆದುಕೊಳ್ಳಲು ನಗರಕ್ಕೆ ಬಂದಿದ್ದ. ಹಾಗೆ ತಮ್ಮ ಸ್ನೇಹಿತರನ್ನು ಫೋನ್ ಮಾಡಿ ಕರೆಯಿಸಿಕೊಂಡಿದ್ದ. ಶಬರೀಷ್ ಜೊತೆ ಮಿಥುನ್, ಶಂಕರ್ ಹಾಗೂ ಅನುಶ್ರೀ ಕಾರಿನಲ್ಲಿ ಕುಳಿತುಕೊಂಡು ರಾತ್ರಿ ಪೂರ್ತಿ ಜಾಲಿ ರೈಡ್ ಮಾಡಿದ್ದಾರೆ. ವಿದೇಶಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಓರಾಯನ್ ಮಾಲ್ನಲ್ಲಿ ಶಾಪಿಂಗ್ ಮಾಡಿ ಪಾರ್ಟಿ ಮಾಡಿ ಊಟ ಮಾಡಿದ್ದಾರೆ. ಬಳಿಕ ರಾತ್ರಿ ಹೊತ್ತು ಮತ್ತೆ ಏನನ್ನಾದರೂ ತಿನ್ನಲೆಂದು ಸದಾಶಿವನಗರದಿಂದ ಯಶವಂತಪುರ ಮೇಲ್ಸೇತುವೆ ಬಳಿ ಬರುವಾಗ ಮಿಥುನ್ ವೇಗವಾಗಿ ವಾಹನ ಚಾಲನೆ ಮಾಡಿದ ಪರಿಣಾಮ ನಿಯಂತ್ರಣಕ್ಕೆ ಸಿಗದೇ ಮುಂದೆ ಹೋಗುತ್ತಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದು ಬಳಿಕ ಬಲಬದಿಯ ಡಿವೈಡರ್ಗೆ ಗುದ್ದಿದ ರಭಸಕ್ಕೆ ಫ್ಲೈ ಓವರ್ನಿಂದ ಕೆಳಗೆ ಬಿದ್ದಿದೆ. ಕಾರು ಕೆಳಗೆ ಹಾರುವ ಮುನ್ನ ಅನುಶ್ರೀ ಮೇಲ್ಸೇತುವೆಯಿಂದ ಹೊರಬಿದ್ದರೆ, ಇನ್ನುಳಿದ ಮೂವರು ಕೆಳಬಿದ್ದ ನಜ್ಜುಗುಜ್ಜಾದ ಕಾರಿನಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಈ ಪೈಕಿ ಶಬರೀಷ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಯಶವಂತಪುರ ಸರ್ಕಲ್ನಲ್ಲಿ ಬೆಳಗಿನ ಜಾವ 3.45ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಡ್ರಂಕ್ ಆ್ಯಂಡ್ ಡ್ರೈವ್ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ಸಿರಿಗೌರಿ ಮಾಹಿತಿ ನೀಡಿದ್ದಾರೆ.
ಪರಿಶೀಲನೆ ವೇಳೆ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಕುಡಿದು ವಾಹನ ಡ್ರೈ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಸಂಚಾರಿ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಇದನ್ನೂ ಓದಿ: VIDEO: ಫ್ಲೈಓವರ್ ತಡೆಗೋಡೆ ಏರಿದ ಕೆಎಸ್ಆರ್ಟಿಸಿ ಬಸ್, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ - KSRTC Bus Accident