ಬೆಂಗಳೂರು : ಕೋಟ್ಯಂತರ ಜನರು ಅನುವಂಶಿಕವಾಗಿ ಬರುವ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದು ಕ್ಲಿನಿಕಲ್ ಚಿಕಿತ್ಸೆಯ ಅಗತ್ಯತೆಯನ್ನು ಎತ್ತಿ ತೋರಿಸುತ್ತಿದೆ. ಆದರೆ, ಪ್ರಸ್ತುತ ಭಾರತದಲ್ಲಿ ಈ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿಲ್ಲ. ಈ ನಿಟ್ಟಿನಲ್ಲಿ ಕೈಗೆಟುಕುವ ಮತ್ತು ಸುಲಭ ವಿಧಾನದಲ್ಲಿ ಜೀನ್ ಚಿಕಿತ್ಸೆ ಅಭಿವೃದ್ಧಿಪಡಿಸಲು ನಾರಾಯಣ ನೇತ್ರಾಲಯ ದಿಟ್ಟ ಹೆಜ್ಜೆಯನ್ನಿಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಧನಂಜಯ್ ವೈ. ಚಂದ್ರಚೂಡ್ ಅಭಿಪ್ರಾಯಪಟ್ಟರು.
ಕೈಗೆಟಕುವ ದರದಲ್ಲಿ ಚಿಕಿತ್ಸೆ, ಸಿಜೆಐ ವಿಶ್ವಾಸ: ನಗರದ ಖಾಸಗಿ ಹೋಟೆಲ್ನಲ್ಲಿ ನಾರಾಯಣ ನೇತ್ರಾಲಯ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿರುವ ಜೀನ್ ಥೆರಪಿ ಮತ್ತು ಪ್ರೆಸಿಷನ್ ಮೆಡಿಸಿನ್ ಕಾನ್ಫರೆನ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಈ ಸಮ್ಮೇಳನ ಅನುವಂಶಿಕ ಕಾಯಿಲೆಗಳಿಗೆ ಜೀನ್ ಮತ್ತು ಸೆಲ್ ಥೆರಪಿಯ ಮೇಲೆ ಕೇಂದ್ರೀಕರಿಸಿದೆ. ಇಲ್ಲಿ ನಿಖರವಾದ ರೋಗನಿರ್ಣಯ ಮತ್ತು ಚಿಕಿತ್ಸೆಗಳ ಕುರಿತು ಪ್ರಾಥಮಿಕ ಬೆಳಕನ್ನು ಚೆಲ್ಲುವ ವಿಶ್ವಾಸವಿದೆ. ಇದರಿಂದ ಕೋಟಿಗಳ ವೆಚ್ಚದಲ್ಲಿ ಇರುವ ಈ ಚಿಕಿತ್ಸೆಗಳು ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ದೊರೆಯಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸಂಶೋಧನೆಗಳ ಪ್ರಕಾರ, 4600ಕ್ಕಿಂತ ಅಧಿಕ ಅನುವಂಶೀಯ ಗುಂಪುಗಳ ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ತಜ್ಞರು, ವಿಜ್ಞಾನಿಗಳು ಮತ್ತು ಭಾರತದ ಉನ್ನತ ಸಂಸ್ಥೆಗಳ ವೈದ್ಯರು ಈ ಸಮ್ಮೇಳನದಲ್ಲಿ ಹಲವು ಚಿಕಿತ್ಸಾ ವಿಧಾನಗಳ ಕುರಿತು ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಲಿದ್ದಾರೆ. ಇದರಿಂದ ಭಾರತೀಯ ರೋಗಿಗಳಿಗೆ ಕೈಗೆಟಕುವ ಜೀನ್ ಥೆರಪಿ ಅಭಿವೃದ್ಧಿ ವೇಗವನ್ನು ಪಡೆಯಲು ಸಹಾಯವಾಗಲಿದೆ ಎಂದು ಹೇಳಿದರು.
ಜೀನ್ ಥೆರಪಿ ಸೆಲ್ ರಿಪೇರಿ ಹೊಸ ವಿಧಾನ: ನಾರಾಯಣ ನೇತ್ರಾಲಯದ ಅಧ್ಯಕ್ಷ ರೋಹಿತ್ ಶೆಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿ, ಜೀನ್ ಥೆರಪಿ ಸೆಲ್ ರಿಪೇರಿ ಮಾಡುವ ಹೊಸ ವಿಧಾನವಾಗಿದೆ. ಹಲವು ಬ್ಲಡ್- ಕಣ್ಣುಗಳ ಕಾಯಿಲೆಗಳು, ಕ್ಯಾನ್ಸರ್ ಅನುವಂಶಿಕವಾಗಿ ಮನುಷ್ಯನನ್ನು ಕಾಡುತ್ತದೆ. ಇದಕ್ಕೆ ನಾರಾಯಣ ನೇತ್ರಾಲಯ ಪರಿಹಾರವನ್ನು ಕಂಡುಕೊಳ್ಳುವ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ. ಇಂದಿನ ಸಮ್ಮೇಳನ ಕೂಡ ಎಲ್ಲರ ಸಹಯೋಗ ಪಡೆದು ಮುನ್ನಡೆಯಲು ವೇದಿಕೆಯಾಗಿದೆ ಎಂದರು.
ಜೀನ್ಗಳಲ್ಲಿ ಕೆಲ ಬದಲಾವಣೆಗಳನ್ನು ತರುವುದು ಹಲವು ರೋಗಗಳನ್ನು ಬರದಂತೆ ತಡೆಗಟ್ಟಲು ಮತ್ತು ಚಿಕಿತ್ಸೆಗೆ ಪರಿಹಾರವಾಗಿದೆ. ಈಗಾಗಲೇ ಹಲವು ಮುಂದುವರಿದ ದೇಶಗಳಲ್ಲಿ ಜೀನ್ ಥೆರಪಿ ನಡೆಸಲಾಗುತ್ತಿದೆ. ಇದರ ಕುರಿತು ಭಾರತದ ಜನರಿಗೆ ತಿಳಿವಳಿಕೆ ಕಡಿಮೆಯಿದೆ. ಈ ನಿಟ್ಟಿನಲ್ಲಿ ಎರಡು ದಿನದ ಸಮ್ಮೇಳನವು ವಿದ್ಯಾರ್ಥಿಗಳು, ರೋಗಿಗಳು, ಸಾರ್ವಜನಿಕರು ಮತ್ತು ವೈದ್ಯಕೀಯ ರಂಗದಲ್ಲಿರುವವರಿಗೆ ಜೀನ್ ಚಿಕಿತ್ಸೆಯ ತಿಳುವಳಿಕೆಯನ್ನು ಗಾಢವಾಗಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ : ಆನುವಂಶಿಕ ರೋಗಗಳ ತಡೆಯುವಲ್ಲಿ ಸಹಾಯ ಮಾಡುತ್ತದೆಯಾ ವ್ಯಾಯಾಮ?