ಬೆಂಗಳೂರು: ರಾಜ್ಯದ ಎಲ್ಲಾ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಸಂಬಂಧ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆಯು ಮೇಲ್ಮನೆಯಲ್ಲಿ ಅಂಗೀಕಾರಗೊಂಡ ಬೆನ್ನಲ್ಲೇ ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್ಗೆ ಹೋಗುವ ಮಹಾರಾಷ್ಟ್ರದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಅಕ್ರೋಶ ವ್ಯಕ್ತಪಡಿಸಿದೆ.
ವಿಧಾನಸೌಧದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ನಮ್ಮ ರಾಜ್ಯದಲ್ಲಿ ನಾವು ಕಾನೂನು ರೂಪಿಸಿದ್ದೇವೆ. ಇದನ್ನ ಪ್ರಶ್ನಿಸಲು ಅವರು ಯಾರು? ನಾವೇನು ಮಹಾರಾಷ್ಟ್ರದ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಎಂದು ಬರೆಸುತ್ತಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಎರಡು ಸದನಗಳಲ್ಲಿ ಎಲ್ಲ ಸದಸ್ಯರು ಬಹಳ ಖುಷಿಯಿಂದ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ನೀಡಿದ್ದಾರೆ. ರಾಜ್ಯಪಾಲರಿಂದ ಮಸೂದೆಗೆ ಅನುಮೋದನೆ ಸಿಗುತ್ತಿದ್ದಂತೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಿದ್ದೇವೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ಭಾಷೆ ಬಗ್ಗೆ ಯಾರೂ ಮಾತನಾಡುವ ಅವಶ್ಯಕತೆಯಿಲ್ಲ. ಕನ್ನಡ ಜಲ, ನೆಲ, ನಾಡು ಬಗ್ಗೆ ಯಾವುದೇ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಮಹಾರಾಷ್ಟ್ರದಲ್ಲಿ ಕನ್ನಡ ಬೋರ್ಡ್ ಹಾಕಿ ಅಂತ ಹೇಳಿದ್ದೇವಾ. ಕರ್ನಾಟಕ ಗಡಿ ಭಾಗವು ಕರ್ನಾಟಕದ್ದೇ. ಇಲ್ಲಿನ ಸೌಲಭ್ಯ ಪಡೆದು ನಮ್ಮ ವಿರುದ್ಧವೇ ಮಾತನಾಡುತ್ತಾರೆ. ಕನ್ನಡ ಬಗ್ಗೆ ಯಾರಾದ್ರು ತಕರಾರು ತೆಗೆದರೇ ಹುಷಾರು. ಅದನ್ನು 100ಕ್ಕೆ 100ರಷ್ಟು ಎಚ್ಚರಿಕೆ ಎಂದು ಜಾರಿಗೆ ತರುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಕನ್ನಡ ನಾಮಫಲಕದ ಪರವಾಗಿ ಹೋರಾಟ ನಡೆಸಿದ್ದವು. ಈ ವೇಳೆ ಕನ್ನಡ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಪರಭಾಷಾ ನಾಮಫಲಕಗಳು ಗುರಿಯಾಗಿದ್ದವು, ಈ ವಿಷಯ ರಾಜ್ಯದಲ್ಲಿ ವ್ಯಾಪಕವಾಗಿ ಗಮನ ಸೆಳೆದಿತ್ತು. ಈ ಎಲ್ಲಾ ಬೆಳವಣಿಗೆ ನಂತರ ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷಾ ಬಳಕೆಯನ್ನು ಕಡ್ಡಾಯಗೊಳಿಸುವ ಮಹತ್ವದ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ'ವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು, ಹೋಟೆಲ್‍ಗಳು ಮತ್ತು ಮುಂತಾದೆಡೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಪ್ರಮಾಣದಲ್ಲಿ ಪ್ರದರ್ಶಿಸುವುದನ್ನು ವಿಧೇಯಕದಲ್ಲಿ ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಅಧಿನಿಯಮದ ಸೆಕ್ಷನ್ 13ಕ್ಕೆ ತಿದ್ದುಪಡಿ ತರಲಾಗಿದ್ದು, ಭಾಷಾ ಅನುಷ್ಠಾನ ರಾಜ್ಯ ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ನಿರ್ದೇಶಕರನ್ನು ಸದಸ್ಯರನ್ನಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರನ್ನು ಸಂಚಾಲಕರನ್ನಾಗಿಯೂ ನೇಮಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ನಾಡಗೀತೆಯನ್ನು ಎಲ್ಲಾ ಶಾಲೆಗಳಲ್ಲಿ ಹಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮರು ಆದೇಶ