ಮೈಸೂರು: ಬೇರೆ ಪಕ್ಷಗಳಲ್ಲಿದ್ದರೂ ನನ್ನ ಹಾಗೂ ಶ್ರೀನಿವಾಸ್ ಪ್ರಸಾದ್ ಅವರ ನಡುವೆ ಉತ್ತಮ ಸ್ನೇಹ ಬಾಂಧವ್ಯ ಮತ್ತು ಒಡನಾಡವಿತ್ತು. ಪರಸ್ಪರ ರಾಜಕೀಯ ವೈರುಧ್ಯಗಳಿದ್ದರೂ ತಮ್ಮ ಸ್ನೇಹಕ್ಕೆ ಎಂದೂ ಧಕ್ಕೆ ಬಂದಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶನಿವಾರ ಮೈಸೂರಿನಲ್ಲಿ ನಡೆದ ದಿ. ಶ್ರೀನಿವಾಸ್ ಪ್ರಸಾದ್ ಅವರ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ, ಶ್ರೀನಿವಾಸ್ ಪ್ರಸಾದ್ ಅವರೊಂದಿಗಿನ ಒಡನಾಟವನ್ನು ನೆನೆದರು.
ಮೊದಲು ಜನತಾದಳದಿಂದ ಶ್ರೀನಿವಾಸ್ ಪ್ರಸಾದ್ ಅವರು ಲೋಕಸಭೆ ಹಾಗೂ ನಂತರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅದಾದ ಬಳಿಕ ಕಾಂಗ್ರೆಸ್ ಪಕ್ಷ ಸೇರಿದ ಅವರು ಹಾಗೂ ನಾನು ಬೇರೆ ಪಕ್ಷಗಳಲ್ಲಿದ್ದರೂ ಕೂಡ, ನಮ್ಮಲ್ಲಿ ಪರಸ್ಪರ ಸ್ನೇಹ, ಗೌರವವಿತ್ತು. ಹಾಗೆಯೇ, ವಿವಿಧ ಪಕ್ಷಗಳಲ್ಲಿನ ಹಲವು ನಾಯಕರೊಂದಿಗೆ ಸ್ನೇಹ, ಒಡನಾಟ ಹೊಂದಿದ್ದರು. ಮನುಷ್ಯತ್ವದಿಂದ ಕೂಡಿದ ಸಜ್ಜನರಾಗಿದ್ದ ಅವರು ಯಾವುದೇ ಪಕ್ಷದಲ್ಲಿದ್ದರೂ, ಅಂಬೇಡ್ಕರ್ ವಿಚಾರಧಾರೆಗಳ ಅನುಯಾಯಿಯಾಗಿದ್ದರು ಎಂದರು.
![Srinivas Prasad Tribute Program](https://etvbharatimages.akamaized.net/etvbharat/prod-images/11-05-2024/ka-mys02-11-05-2024-cm-news2-7208092_11052024174224_1105f_1715429544_822.jpg)
ರಾಜಕೀಯ ಟೀಕೆಗಳು ಸ್ವಾಭಾವಿಕ: ಶ್ರೀನಿವಾಸ್ ಪ್ರಸಾದ್ ಅವಕಾಶ ವಂಚಿತರಿಗೆ ಜಾತ್ಯತೀತವಾಗಿ ಸಮಾನತೆ ನೀಡಬೇಕೆಂಬುದನ್ನು ನಂಬಿ ಸಂವಿಧಾನದ ಬಗ್ಗೆ ಬದ್ಧತೆ ಹೊಂದಿದ್ದರು. ಬುದ್ಧ, ಬಸವಣ್ಣ, ಗಾಂಧೀಜಿಯವರ ವಿಚಾರಧಾರೆಗಳನ್ನು ನಂಬಿ ನಡೆಯುವವರು ಎಂದಿಗೂ ಮನುಷ್ಯತ್ವ ಪಾಲಿಸುವವರಾಗಿರುತ್ತಾರೆ. ಮನುಷ್ಯ ಮನುಷ್ಯನನ್ನು ಪರಸ್ಪರ ಗೌರವಿಸಬೇಕೇ ಹೊರತು ದ್ವೇಷಿಸಬಾರದು. ರಾಜಕೀಯ ವೈರುಧ್ಯಗಳಿಂದಾಗಿ ಪರಸ್ಪರ ಟೀಕಿಸುವುದು ಸ್ವಾಭಾವಿಕವಾಗಿದ್ದರೂ, ನಮ್ಮ ಸ್ನೇಹಕ್ಕೆಂದೂ ಧಕ್ಕೆ ಬಂದಿರಲಿಲ್ಲ. ಇತ್ತೀಚೆಗೆ ಅವರು ರಾಜಕೀಯ ನಿವೃತ್ತಿ ಪಡೆದ ನಂತರ, ನನ್ನ ಕೆಲವು ಶಾಸಕ ಮಿತ್ರರೊಂದಿಗೆ ತೆರಳಿ ಭೇಟಿ ಮಾಡಿದ್ದೆ. ಅವರೊಂದಿಗಿನ ಅರ್ಧಗಂಟೆಯ ಭೇಟಿಯಲ್ಲಿ ನಮ್ಮ ಹಿಂದಿನ ಸ್ನೇಹ ಮರುಕಳಿಸಿತ್ತು ಎಂದರು.
ಸ್ವಾಭಿಮಾನ ಇಲ್ಲದಿದ್ದರೆ ಗುಲಾಮಗಿರಿಗೆ ಬಲಿ: ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಬಡವರಿಗೆ ಸ್ವಾಭಿಮಾನ ಇರಲೇಬೇಕು. ನಮ್ಮಲ್ಲಿ ಸ್ವಾಭಿಮಾನವಿದ್ದರೆ ಮಾತ್ರ ಮನುಷ್ಯರಾಗಿ ಬಾಳಲು ಸಾಧ್ಯ, ಇಲ್ಲದಿದ್ದರೆ ಗುಲಾಮಗಿರಿಗೆ ಗುರಿಯಾಗಬೇಕಾಗುತ್ತದೆ. ಶ್ರೀನಿವಾಸ್ ಪ್ರಸಾದ್ ಎಂದೂ ಗುಲಾಮಗಿರಿಗೆ ಬಲಿಯಾಗಿರಲಿಲ್ಲ. ಹಳೆಯ ತಲೆಮಾರಿನ ರಾಜಕೀಯ ಮುತ್ಸದ್ದಿಯ ನಿಧನದಿಂದ ಮಹತ್ತರವಾದ ರಾಜಕೀಯ ಕೊಂಡಿ ಕಳಚಿದೆ. ಅವರ ವಿಚಾರಧಾರೆಗಳು ಇಂದಿನ ಯುವಕರಿಗೆ ಆದರ್ಶವಾಗಬೇಕು ಎಂದು ಸಿಎಂ ತಿಳಿಸಿದರು.
ಸ್ವಾಭಿಮಾನಿ ರಾಜಕಾರಣಿ ಎಂದ ಬಿಎಸ್ವೈ: ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಶ್ರೀನಿವಾಸ್ ಪ್ರಸಾದ್ ಸಾಮಾಜಿಕ ನ್ಯಾಯದಲ್ಲಿ ಚಾಂಪಿಯನ್ ಆಗಿದ್ದರು. ಬಡವರು ದೀನ, ದಲಿತರ ಪರವಾಗಿ ತಮ್ಮ ಜೀವನವನ್ನೇ ಪಣವಾಗಿ ಇಟ್ಟವರು. ನಾನು ಕಂಡ ಪ್ರಭಾವಿ ನಾಯಕ, ಸ್ವಾಭಿಮಾನಿ ರಾಜಕಾರಣಿ ಶ್ರೀನಿವಾಸ್ ಪ್ರಸಾದ್ ಇಂದು ನಮ್ಮ ಜೊತೆಗೆ ಇಲ್ಲದಿದ್ದರೂ, ಸೈದ್ಧಾಂತಿಕ ಸಾಧನೆಗಳು ಅವರ ಸಾರ್ಥಕ ಜೀವನಕ್ಕೆ ಸಾಕ್ಷಿಯಾಗಿದೆ ಎಂದರು.
![Srinivas Prasad Tribute Program](https://etvbharatimages.akamaized.net/etvbharat/prod-images/11-05-2024/ka-mys02-11-05-2024-cm-news2-7208092_11052024174224_1105f_1715429544_1027.jpg)
ಏಪ್ರಿಲ್ 14ರಂದು ಅವರನ್ನು ನಾನು ಭೇಟಿ ಮಾಡಿದೆ. ಅದಾದ ಬಳಿಕ ಏಪ್ರಿಲ್ 29ರಂದು ಅವರು ನಿಧನರಾಗಿದ್ದು ಅತ್ಯಂತ ಆಘಾತ ಉಂಟು ಮಾಡಿದೆ. ರಾಜ್ಯ ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸಿದ್ದರು. ಅಂಬೇಡ್ಕರ್ ಹೇಳಿದಂತೆ ಸಮಾಜದ ಸೇವಕನಾದ ವ್ಯಕ್ತಿಯನ್ನು ಎಲ್ಲರೂ ನೆನೆಸಿಕೊಳ್ಳುತ್ತಾರೆ. ಶ್ರೀನಿವಾಸ್ ಪ್ರಸಾದ್ ಅತ್ಯಂತ ಶ್ರೇಷ್ಠ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಒಂದು ಚುನಾವಣೆಯಲ್ಲಿ ಗೆಲ್ಲುವುದೇ ಕಷ್ಟ. ಆದರೆ, ಶ್ರೀನಿವಾಸ್ ಪ್ರಸಾದ್ ಚಾಮರಾಜನಗರ, ಮೈಸೂರು ಲೋಕಸಭಾ ಕ್ಷೇತ್ರದಿಂದ 6 ಬಾರಿ ಸಂಸದರಾಗಿ ಆಯ್ಕೆ ಆಗಿದ್ದು, ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅವರು 2024ರಲ್ಲಿ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದರೂ ಕೂಡ ಹಾಲಿ ಸಂಸದರಾಗಿದ್ದರು. ಜನಪ್ರಿಯ ನಾಯಕರಾಗಿ, ಶೋಷಿತರ ಪರ ಸಾರ್ವಜನಿಕರಿಗೆ ಮಾದರಿಯಾಗಿದ್ದು, ಚಿಂತನೆಗಳು, ರಾಜಕೀಯ ಹೋರಾಟ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರೆಯುತ್ತೆ: ಬಿ ಎಸ್ ಯಡಿಯೂರಪ್ಪ