ಮೈಸೂರು : ಮೈಸೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಅಧೀಕ್ಷಕರಾದ ಶ್ರೀ ಉದ್ದೇಶ್ ಅವರು ನಾಪತ್ತೆಯಾಗಿರುವ ಬಗ್ಗೆ ಹಾಗೂ ಅಪಹರಣ ಅಥವಾ ಅಕ್ರಮ ಬಂಧನ ಆಗಿರುವ ಸಾಧ್ಯತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಸಿಎಂ ವಿರುದ್ದ ತನಿಖೆ ನಡೆಸಬೇಕು ಎಂದು ಜನಪ್ರತಿನಿಧಿಗಳ ನ್ಯಾಯಾಲಯ ನೀಡಿದ ಆದೇಶದ ಹಿನ್ನೆಲೆ ಇಂದು ಮೈಸೂರು ಲೋಕಾಯುಕ್ತ ಕಚೇರಿಗೆ ಆಗಮಿಸಿದ ದೂರುದಾರ ಸ್ನೇಹಮಯಿ ಕೃಷ್ಣ, ಲೋಕಾಯುಕ್ತ ಕಚೇರಿಯಲ್ಲಿ ಲೋಕಾಯುಕ್ತ ಎಸ್ಪಿ ಉದ್ದೇಶ್ ಇಲ್ಲದಿದ್ದ ಕಾರಣ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಕರೆ ಸ್ವೀಕರಿಸದ ಹಿನ್ನೆಲೆ ಗುರುವಾರ ಮಧ್ಯಾಹ್ನ 3 ಗಂಟೆಗೆ ಸಮೀಪದ ದೇವರಾಜ ಪೊಲೀಸ್ ಠಾಣೆಗೆ ಲೋಕಾಯುಕ್ತ ಎಸ್ಪಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಲು ಹೋದಾಗ ಪೊಲೀಸರು ಇವರ ದೂರನ್ನ ಸ್ವೀಕರಿಸಲಿಲ್ಲ ಎಂದಿದ್ದಾರೆ.
ಕೊನೆಗೆ ದೇವರಾಜ್ ಎ.ಸಿ.ಪಿ ಕಚೇರಿಗೆ ದೂರು ನೀಡಲು ಹೋದಾಗ ದೂರು ಸ್ವೀಕರಿಸದ ಹಿನ್ನೆಲೆ ಸ್ನೇಹಮಯಿ ಕೃಷ್ಣ ನೇರವಾಗಿ ಮೈಸೂರು ನಗರ ಪೊಲೀಸ್ ಕಮಿಷನರ್ ಅವರ ಕಚೇರಿಗೆ ಹೋಗಿ ಮೈಸೂರು ಲೋಕಾಯುಕ್ತ ಎಸ್ಪಿ ನಾಪತ್ತೆಯಾಗಿದ್ದಾರೆ, ಇವರು ಅಪಹರಣ ಅಥವಾ ಅಕ್ರಮ ಬಂಧನಕ್ಕೆ ಒಳಗಾಗಿರುವ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮೂರು ಪುಟದ ದೂರು ನೀಡಿರುವುದಾಗಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮೈಸೂರು ಲೋಕಾಯುಕ್ತ ಎಸ್ಪಿ ನಾಪತ್ತೆಯಾಗಿರುವ ಅನುಮಾನವಿದೆ: ದೂರುದಾರ ಸ್ನೇಹಮಯಿ ಕೃಷ್ಣ - Snehamai Krishna