ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲಾಗಿದೆ.
ಸಿಎಂ ಪತ್ನಿ ಹೆಸರಿನಲ್ಲಿ ಬದಲಿ ನಿವೇಶನ ಪಡೆದ ಪ್ರಕರಣದಲ್ಲಿ ದಾಖಲೆಗಳನ್ನು ತಿದ್ದಲಾಗಿರುವ ಅನುಮಾನ ಇದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮೈಸೂರು ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಸಿಎಂ ಪತ್ನಿ ಪಾರ್ವತಮ್ಮ ಹಾಗೂ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ, ಎಂ. ಲಕ್ಷ್ಮಣ್ ಒಬ್ಬ ರಣಹೇಡಿ. ಆತನ ಕೊನೆಯ ಅಸ್ತ್ರ ಅಪಪ್ರಚಾರ ಮಾಡುವುದು. ನನ್ನ ಪರವಾಗಿ 100 ಕೋಟಿ ಕೇಳಿದವರು ಯಾರು?, ಯಾವಾಗ?, ಎಲ್ಲಿ?. ಯಾಕೆ ನನ್ನ ವಿರುದ್ಧ ಇನ್ನೂ ದೂರು ಕೊಟ್ಟಿಲ್ಲ?. ನನ್ನ ವಿರುದ್ಧ ಮಾಡಿದ ಎಲ್ಲಾ ಆರೋಪಗಳಿಗೂ ಲಕ್ಷ್ಮಣ್ ಸ್ಪಷ್ಟೀಕರಣ ನೀಡಬೇಕು. ಇಲ್ಲ ಎಂದರೆ ಲಕ್ಷ್ಮಣ್ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಎಂ. ಲಕ್ಷ್ಮಣ್ ಹೇಳಿದ್ದೇನು: ಮತ್ತೊಂದೆಡೆ, ಸಿಎಂ ಪತ್ನಿ ಹಾಗೂ ತಮ್ಮ ವಿರುದ್ಧ ದೂರು ದಾಖಲಿಸಿರುವ ಬಗ್ಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಒಬ್ಬ ಬ್ಲಾಕ್ ಮೇಲರ್ ಹಾಗೂ ರೌಡಿಶೀಟರ್. ಆತನ ವಿರುದ್ಧ ರಾಜ್ಯಾದ್ಯಂತ 44 ಪ್ರಕರಣಗಳು ದಾಖಲಾಗಿವೆ. ಮುಡಾ ಪ್ರಕರಣದಲ್ಲಿ ಸಿಎಂ ಕೇಸ್ ಸಂಬಂಧ ಸ್ನೇಹಮಯಿ ಕೃಷ್ಣ ಕಡೆಯವರು ನನ್ನ ಹತ್ತಿರ 100 ಕೋಟಿ ರೂ. ಡೀಲ್ಗೆ ಬಂದಿದ್ದರು. ಅಪರಿಚಿತರೊಬ್ಬರು ಸ್ನೇಹಮಯಿ ಕೃಷ್ಣ ಅವರನ್ನು ಅಡ್ಜಸ್ಟ್ ಮಾಡಿಕೊಳ್ಳಿ ಸರ್ ಅಂತ ನನಗೆ ಮೆಸೇಜ್ ಮಾಡಿದ್ದರು ಎಂದು ಹೇಳಿದರು.
ಆ ವ್ಯಕ್ತಿ ಯಾರು ಅಂತ ನಾನು ಈಗ ಹೇಳಲ್ಲ. ಅವರು 100 ಕೋಟಿ ರೂ. ಕೊಡಿ ಅಂದರು. ನಾನು ತಪ್ಪೇ ಇಲ್ಲದೇ ನಾವು ಯಾಕೆ ಹಣ ಕೊಡಬೇಕು ಅಂತ ಹೇಳಿದೆ. ಆತ ಈ ಹಿಂದೆಯೂ ಇಂತಹ ಅನೇಕ ಕೇಸ್‌ಗಳಲ್ಲಿ ಇದೇ ರೀತಿ ಮಾಡಿದ್ದಾನೆ. ಈ ಬಗ್ಗೆ ದಾಖಲೆ ಇಲ್ಲ, ಇನ್ನೂ ದೂರು ಕೂಡ ಕೊಟ್ಟಿಲ್ಲ. ಮುಂದಿನ ದಿನ ಅದೇ ವ್ಯಕ್ತಿಯನ್ನು ಕರೆದುಕೊಂಡು ಬಂದು ಮಾಧ್ಯಮಗೋಷ್ಟಿ ಮಾಡಿಸುತ್ತೇನೆ ಎಂದು ತಿಳಿಸಿದರು.
ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 44 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೈಸೂರಿನಲ್ಲೇ 17 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಹಾಕಲಾಗಿದೆ. ಈಗಲೂ ರೌಡಿಶೀಟರ್ ಆಗಿದ್ದಾರೆ. ಜತೆಗೆ ಆತನ ವಿರುದ್ಧ ಕೊಲೆ, ಸುಲಿಗೆ, ಬ್ಲಾಕ್ ಮೇಲ್, ಬೆದರಿಕೆ ಸೇರಿದಂತೆ ಇನ್ನಿತರ ಆರೋಪಗಳಡಿ ಪ್ರಕರಣಗಳು ದಾಖಲಾಗಿವೆ ಎಂದು ಲಕ್ಷ್ಮಣ್ ಕಿಡಿಕಾರಿದರು.