ಬೆಂಗಳೂರು: ಆರ್ವಿ ರಸ್ತೆ - ಬೊಮ್ಮಸಂದ್ರದ ನಡುವೆ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ ಚೀನಾದ ಶಾಂಘೈನಿಂದ ಬಂದ ಚಾಲಕ ರಹಿತ ರೈಲಿನ ಆರು ಬೋಗಿಗಳು ಮಂಗಳವಾರ ಅನಾವರಣಗೊಂಡಿವೆ. ಹೆಬ್ಬಗೋಡಿ ಡಿಪೋದಲ್ಲಿ ಎಲ್ಲ ಬೋಗಿಗಳನ್ನು ಜೋಡಿಸಿಕೊಳ್ಳಲಾಗಿದ್ದು, ಇವುಗಳ ತಪಾಸಣಾ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶಾಂಘೈ ಬಂದರಿನಿಂದ ಚೆನ್ನೈಗೆ ಜನವರಿ 24ರಂದು ಬಂದಿದ್ದ ರೈಲು ಬೋಗಿಗಳು ಬೆಂಗಳೂರಿಗೆ ಫೆಬ್ರವರಿ 14ರಂದು ತರಲಾಗಿತ್ತು. ಡಿಪೋದಲ್ಲಿ ರೈಲು ಬೋಗಿಗಳನ್ನು ಮಂಗಳವಾರ ಬೆಳಗ್ಗೆ ಅನಾವರಣಗೊಳಿಸಲಾಯಿತು. ಬಳಿಕ ಚೀನಾದ ಎಂಜಿನಿಯರ್‌ಗಳ ಸಮ್ಮುಖದಲ್ಲಿ ಎಲ್ಲ ಬೋಗಿಗಳನ್ನು ಜೋಡಿಸುವ ಕಾರ್ಯ ಮಾಡಲಾಗಿದ್ದು, ತಪಾಸಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇವುಗಳ ಒಳಗಿನ ಒಂದಿಷ್ಟು ಪರಿಕರಗಳನ್ನು ಜೋಡಣೆ ಮಾಡುವುದು, ಬೋಗಿ ಹಾಗೂ ಎಂಜಿನ್‌ಗಳ ಸುಸ್ಥಿತಿ, ಸ್ಥಿರ ಪರೀಕ್ಷೆ ನಡೆಸಿ ಶೀಘ್ರವೇ ತಪಾಸಣಾ ಕಾರ್ಯ ನಡೆಸಲಾಗುವುದು. ಈ ರೈಲನ್ನು ಬಹುತೇಕ ಮಾರ್ಚ್ ತಿಂಗಳಿನಲ್ಲಿ ಹಳದಿ ಮಾರ್ಗದ ರೈಲ್ವೆ ಹಳಿಗೆ ತಂದು ಪ್ರಾಯೋಗಿಕ ಸಂಚಾರ ಪ್ರಾರಂಭಿಸಲಾಗುವುದು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಚೀನಾದ ಸಿಆರ್‌ಆರ್‌ಸಿ ಕಂಪನಿಯ ಭಾರತದ ಸಹವರ್ತಿಯಾದ ಕೋಲ್ಕತ್ತಾದ ತೀತಾಘರ್ ರೈಲ್ ಫ್ಯಾಕ್ಟರಿ ಏಪ್ರಿಲ್‌ನಿಂದ ಪ್ರತಿ ತಿಂಗಳು 6 ಕೋಚ್‌ಗಳ 1 ರೈಲಿನ ಎರಡು ಸೆಟ್‌ಗಳನ್ನು ಪೂರೈಕೆ ಮಾಡಲಿದೆ. ಹಳದಿ ಮಾರ್ಗದಲ್ಲಿ ಒಟ್ಟಾರೆ ರೈಲುಗಳ ಸೇವೆಗೆ ಇನ್ನೂ ಐದಾರು ತಿಂಗಳ ಕಾಲಾವಕಾಶ ಬೇಕಿದೆ ಎಂದು ಹೇಳಿದ್ದಾರೆ.
ಓದಿ: ಬೆಂಗಳೂರು: ಚಾಲಕ ರಹಿತ ಮೆಟ್ರೋ ಬೋಗಿಗಳ ಆಗಮನ, ಮಾಚ್ 1ರಿಂದ ಪ್ರಯೋಗಾರ್ಥ ಪರೀಕ್ಷೆ