ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಸುಳಿವು ಇನ್ನೂ ಎಸ್ಐಟಿಗೆ ಸಿಕ್ಕಿಲ್ಲ. ಈ ಹಿನ್ನೆಲೆ ಅವರಿಗೆ ರೆಡ್ ಕಾರ್ನರ್ ನೋಟಿಸ್ ನೀಡಲು ಚಿಂತನೆ ನಡೆಸಿರೋದಾಗಿ ಎಸ್ಐಟಿ ಮೂಲಗಳು ತಿಳಿಸಿವೆ.
ಪ್ರಜ್ವಲ್ ರೇವಣ್ಣ ಪತ್ತೆಗೆ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಕಾನೂನು ಪ್ರಕ್ರಿಯೆಗಳನ್ನ ಪೂರ್ಣಗೊಳಿಸಬೇಕಿದೆ. ಏಕಾಏಕಿ ಈ ನೋಟಿಸ್ ಜಾರಿ ಅಸಾಧ್ಯ. ಹೀಗಾಗಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಆರೋಪದಡಿ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕು. ದೋಷಾರೋಪ ಪಟ್ಟಿ ಸಲ್ಲಿಸದಿದ್ದಲ್ಲಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದರೆ ಅಮಾನ್ಯವಾಗಲಿದೆ. ಹೀಗಾಗಿ ಎಸ್ಐಟಿಯು ಪ್ರಕರಣಗಳ ತನಿಖೆ ನಡೆಸಿ ಆದಷ್ಟು ಬೇಗನೇ ಚಾರ್ಜ್ ಶೀಟ್ ಸಲ್ಲಿಸುವುದರ ಮೇಲೆ ಗಮನ ಹರಿಸಿರುವುದಾಗಿ ಮೂಲಗಳು ತಿಳಿಸಿವೆ.
ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ನ್ಯಾಯಾಲಯದಿಂದ ವಾರೆಂಟ್ ಜಾರಿಯಾದಾಗ ಮಾತ್ರ ರೆಡ್ ಕಾರ್ನರ್ ನೋಟಿಸ್ ಪ್ರಕ್ರಿಯೆ ನಡೆಸಲು ಸುಲಭ ಸಾಧ್ಯವಾಗುತ್ತದೆ. ಸಿಐಡಿಯು ಸಿಬಿಐಗೆ ಪತ್ರ ಬರೆದು ಅದರಂತೆ ಸಿಬಿಐ ಇಂಟರ್ ಪೋಲ್ ಗೆ ಮಾಹಿತಿ ನೀಡಬೇಕಾಗುತ್ತದೆ. ಅನುಸರಿಸಬೇಕಾದ ಅಂಶಗಳನ್ನು ಪೂರ್ಣಗೊಳಿಸಿದಾಗ ಮಾತ್ರ ಇಂಟರ್ ಪೋಲ್ ಸದಸ್ಯ ರಾಷ್ಟ್ರಗಳಿಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಿದೆ.
ಒಮ್ಮೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದರೆ ಆರೋಪಿಯು ದೇಶದ ಯಾವುದೇ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟರೆ ತಕ್ಷಣ ಮಾಹಿತಿ ಸಿಗಲಿದೆ. ಬಳಿಕ ಎಮಿಗ್ರೇಷನ್ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ಇಂಟರ್ಪೋಲ್ಗೆ ಮಾಹಿತಿ ರವಾನಿಸಲಿದ್ದಾರೆ. ಇಂಟರ್ ಪೋಲ್ ಅಧಿಕಾರಿಗಳು ಸಂಬಂಧಿಸಿದ ತನಿಖಾ ತಂಡಕ್ಕೆ ಆರೋಪಿಯನ್ನು ಒಪ್ಪಿಸಲಿದ್ದಾರೆ.
ಅಶ್ಲೀಲ ವಿಡಿಯೋದ ಪೆನ್ಡ್ರೈವ್ ಬಹಿರಂಗವಾದ ಬಳಿಕ ಪ್ರಜ್ವಲ್ ದೇಶ ಬಿಟ್ಟು ತೆರಳಿದ್ದು, ಈಗಾಗಲೇ ಲುಕ್ ಔಟ್ ನೋಟಿಸ್ ಹಾಗೂ ಬ್ಲ್ಯೂ ಕಾರ್ನರ್ ನೋಟಿಸ್ ಹೊರಡಿಸಲಾಗಿದ್ದರೂ ಪ್ರಜ್ವಲ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅವರು ಭಾರತಕ್ಕೆ ಮರಳಲು ಎರಡು ಬಾರಿ ಟಿಕೆಟ್ ಬುಕ್ ಮಾಡಿ ಪ್ರಯಾಣ ರದ್ದು ಮಾಡಿದ್ದಾರೆಂದು ವರದಿಯಾಗಿದೆ.
ಇದನ್ನೂ ಓದಿ: ಹಾಸನ: ಸಂಸದ ಪ್ರಜ್ವಲ್ ನಿವಾಸದಲ್ಲಿ ಎಫ್ಎಸ್ಎಲ್ ತಜ್ಞರಿಂದ ಪರಿಶೀಲನೆ - PRAJWAL REVANNA CASE