ರಾಯಚೂರು: ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣ ಭೇದಿಸಿರುವ ಸಿಂಧನೂರು ನಗರ ಪೊಲೀಸರು, ಓರ್ವ ಆರೋಪಿ ಸಹಿತ 2 ಕೆಜಿ 5 ತೊಲೆ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಕಂದರಬಾದ್ ಮೂಲದ ಬಂಗಾರ ವ್ಯಾಪಾರಿಗಳಾದ ದರಮೇಶ ಕುಮಾರ್ ಹಾಗೂ ನಿರ್ಮಲ್ ಕುಮಾರ ಜೈನ್ ಎನ್ನುವವರು ಕಮೀಷನ್ ಆಧಾರದ ಮೇಲೆ ಬಂಗಾರ ಮಾರಾಟ ಮಾಡಲು ಸಿಕಂದರಬಾದ್ ಮೂಲದ ಬಂಗಾರ ವ್ಯಾಪಾರಿ ಭರತ್ ಕುಮಾರ್ ಎನ್ನುವವರಿಂದ ಕೋಟ್ಯಂತರ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಅ.12 ರಂದು ರಾಯಚೂರು ಜಿಲ್ಲೆಗೆ ತಂದಿದ್ದರು. ಸಿಂಧನೂರು ನಗರದ ಜೈನ್ ಧರ್ಮಶಾಲೆಯ ಕೋಣೆಯೊಂದರಲ್ಲಿ ಬಂಗಾರ ಸಮೇತ ವಾಸ್ತವ್ಯ ಹೂಡಿದ್ದರು.
ಮರುದಿನ ಸಿಂಧನೂರಿನ ಹಲವೆಡೆ ಬಂಗಾರ ವ್ಯಾಪಾರ ಮಾಡುವ ಉದ್ದೇಶ ಹೊಂದಿದ್ದರು. ಆದರೆ, ಇದ್ದ ಇಬ್ಬರ ಪೈಕಿ ಬಂಧಿತ ಆರೋಪಿ ನಿರ್ಮಲ್ ಕುಮಾರ್ ಜೈನ್ ದರಮೇಶನಿಗೆ ತಿಳಿಯದಂತೆ ಎಲ್ಲ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಮಾನ್ವಿ ಪಟ್ಟಣದ ಬಾಲಾಜಿ ಕಂಪರ್ಟ್ಸ್ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿದ್ದ.
ಬಂಗಾರದ ಮೂಲ ಮಾಲೀಕ ಭರತ್ ಕುಮಾರ್ ಕಳ್ಳತನವಾದ ವಿಷಯ ತಿಳಿದು ಸಿಂಧನೂರು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಹುಕೋಟಿ ಮೌಲ್ಯದ ಬಂಗಾರದ ಕಳ್ಳತನದ ಪ್ರಕರಣ ಗಂಭೀರವಾಗಿ ಪರಿಗಣಿಸಿ ಸಿಂಧನೂರು ಉಪವಿಭಾಗದ ಡಿವೈಎಸ್ಪಿ ಬಿ.ಎಸ್.ತಳವಾರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ವೈಜ್ಞಾನಿಕ ವಿಧಾನಗಳಿಂದ ಕಳ್ಳನನ್ನು ಪತ್ತೆ ಹಚ್ಚಿ ಆತನಿಂದ ಸಿಕಂದರಬಾದ್ ಬಂಗಾರ ಸೇರಿದಂತೆ ವಿವಿಧೆಡೆ ಕಳ್ಳತನ ಮಾಡಿದ ಒಟ್ಟು 2 ಕೆಜಿ 5 ತೊಲೆ ಬಂಗಾರದ ಆಭರಣಗಳು ಹಾಗೂ 40,150 ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಬಂಗಾರದ ಆಭರಣಗಳ ಮೌಲ್ಯ 1 ಕೋಟಿ 43 ಲಕ್ಷದ 92 ಸಾವಿರ ರೂಗಳು ಎಂದು ಅಂದಾಜಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.
ನಗರದಲ್ಲಿ ಇತ್ತೀಚೆಗೆ ವಿವಿದೆಡೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿತ್ತು. ಆರೋಪಿ ಸಮೇತ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಎಸ್ಪಿ ಬಹುಮಾನ ನೀಡಿದರು. ಸಿಂಧನೂರು ಉಪವಿಭಾಗಧೀಕಾರಿ ಬಿ.ಎಸ್. ತಳವಾರ, ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್, ಪಿಎಸ್ಐಗಳಾದ ಯರಿಯಪ್ಪ, ಬಸವರಾಜ ಈ ವೇಳೆ ಹಾಜರಿದ್ದರು.