ತುಮಕೂರು: ಸಿದ್ದಗಂಗಾ ಮಠದಲ್ಲಿ ಶನಿವಾರ ಅದ್ಧೂರಿಯಾಗಿ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಿತು. ಸಾವಿರಾರು ಭಕ್ತರು ರಥವನ್ನು ಎಳೆದು ಪುನೀತರಾದರು. ಮಠದ ಆವರಣದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಿದ್ದಲಿಂಗೇಶ್ವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿ ಸ್ಥಾಪಿಸಲಾಗಿತ್ತು. ಸಾವಿರಾರು ಮಂದಿ ಭಕ್ತರು ರಥವನ್ನು ಎಳೆದು ಭಕ್ತಿ ಭಾವ ಮೆರೆದರು. ಇದೆ ವೇಳೆ ವಿವಿಧ ಜಾನಪದ ಕಲಾತಂಡಗಳು ಹಾಗೂ ಮಠದ ಮಕ್ಕಳು ಕಲಾ ಸೇವೆ ನೆರವೇರಿಸಿರು. ರಥೋತ್ಸವಕ್ಕೆ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ಶನಿವಾರ ಸರಿಯಾಗಿ ಬೆಳಗ್ಗೆ 11:30ಕ್ಕೆ ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ರಥೋತ್ಸವ ಆರಂಭವಾಯಿತು. ಹತ್ತಕ್ಕೂ ಹೆಚ್ಚು ವಿವಿಧ ಮಠಗಳ ಮಠಾಧೀಶರು ರಥೋತ್ಸವದಲ್ಲಿ ಪಾಲ್ಗೊಂಡರು. ರಥಕ್ಕೆ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಃ, ಕಳಸಗಳ ಆರಾಧನೆ, ರಥಾಂಗ ಪೂಜೆ ಸೇರಿದಂತೆ ವಿವಿಧ ಪೂಜೆ ಸಲ್ಲಿಸಿ ಶ್ರೀಕ್ಷೇತ್ರದ ಆರಾಧ್ಯ ದೈವ ಸಿದ್ದಲಿಂಗೇಶ್ವರಸ್ವಾಮಿಯನ್ನು ರಥಕ್ಕೆ ಕೂರಿಸಿ ರಾಜೋಪಚಾರ ಮತ್ತು ಅಷ್ಟೋತ್ತರ ಪೂಜೆ ನೆರವೇರಿಸಲಾಯಿತು. ರಥದ ಮುಂಭಾಗದಲ್ಲಿ ಜಯಾದಿ ಹೋಮ, ಗಣಹೋಮ, ಮೃತ್ಯುಂಜಯ ಹೋಮ ಸಹ ಮಾಡಲಾಯಿತು.
ರಥವನ್ನು ಅಭೂತಪೂರ್ಣ ವಸ್ತ್ರಗಳಿಂದ ಸುವರ್ಣ ಕಲಶಗಳಿಂದ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು. ರಥ ಸಾಗಿದ ದಾರಿಯುದ್ದಕ್ಕೂ ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೆರೆದಿದ್ದ ಭಕ್ತ ಸಮೂಹವನ್ನು ಆಕರ್ಷಿಸಿದವು. ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸುಡು ಬಿಸಿಲನ್ನೂ ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಬಾಳೆಹಣ್ಣು, ಹೂವು, ದವನ ಎಸೆದು ಭಕ್ತಿ ಸಮರ್ಪಿಸಿದರು.
ಕಿರಿಯ ಸ್ವಾಮೀಜಿ ಶಿವಸಿದ್ದೇಶ್ವರ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಮಹಾನಗರ ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜಾ, ವಿವಿಧ ಮಠಾಧೀಶರು, ಅನೇಕ ಗಣ್ಯರು, ಭಕ್ತಾದಿಗಳು ಪಾಲ್ಗೊಂಡು ರಥವನ್ನು ಮುಂದಕ್ಕೆ ಎಳೆದು ಭಕ್ತಿ ಸಮರ್ಪಿಸಿದರು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಭಕ್ತರು ಮಠದ ಶಾಲಾ ಕಟ್ಟಡಗಳ ಮೇಲೆ ಹತ್ತಿ ರಥೋತ್ಸವವನ್ನು ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಿಎಂ ಸಿದ್ದರಾಮಯ್ಯರಿಗಾಗಿ ಹರಕೆ ತೀರಿಸಿದ ಭಕ್ತ: ಭಕ್ತನೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಎರಡನೇ ಬಾರಿಗೆ ಮುಖ್ಯಮಂತ್ರಿ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದರು. ಬೆಳಗಾವಿ ಮೂಲದ ಭಕ್ತರಾದ ಇವರು ಕಳೆದ ವರ್ಷ ರಥೋತ್ಸವದ ವೇಳೆ ಹರಕೆಯನ್ನು ಕಟ್ಟಿಕೊಂಡಿದ್ದಾರಂತೆ. ಅದರಂತೆ ತಮ್ಮ ಇಷ್ಟಾರ್ಥ ಸಿದ್ಧಿಸಿದ ಹಿನ್ನೆಲೆಯಲ್ಲಿ ಹರಕೆಯನ್ನು ತೀರಿಸಿದನೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲಕ್ಷಾಂತರ ಭಕ್ತರ ಹರ್ಷೋದ್ಘಾರ: ಸಿದ್ಧಾರೂಢರ ಅದ್ಧೂರಿ ರಥೋತ್ಸವ